ಕೋಲಾರ: ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಕೊಲೆಗೆ ಪೊಲೀಸರ ಭದ್ರತಾ ವೈಫಲ್ಯವೇ ಕಾರಣ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಕಿಡಿ ಕಾರಿದ್ದಾರೆ.
ಪೊಲೀಸರ ವೈಫಲ್ಯದಿಂದಲೇ ಈ ಘಟನೆ ನಡೆದಿದೆ. ಇಂದು, ನಾಳೆ, ಮುಂದೆಯೂ ಇದೇ ಮಾತು ನನ್ನದು. ಭದ್ರತಾ ವೈಫಲ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ ನೀಡಿದ್ದಾರೆ.
ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಜುಲೈ 9ರಂದು ಸರ್ವೆ ನಡೆಸುತ್ತಿದ್ದ ವೇಳೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರಿಗೆ ಚಾಕುವಿನಿಂದ ಇರಿದು ನಿವೃತ್ತ ಶಿಕ್ಷಕ ವೆಂಕಟಪತಿ ಕೊಲೆ ಮಾಡಿದ್ದ.
ಘಟನೆ ನಡೆದ ದಿನ ಪೊಲೀಸರು ಕೊಂಚ ಮುತುವರ್ಜಿ ವಹಿಸಿದ್ದರೂ ಓರ್ವ ಪ್ರಾಮಾಣಿಕ ಅಧಿಕಾರಿಯ ಪ್ರಾಣ ಉಳಿಯುತ್ತಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಿ ಸತ್ಯಭಾಮ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಘಟನೆ ನಡೆದು 10 ದಿನವಾದರೂ ಸ್ಥಳದಲ್ಲಿದ್ದ ಪೆÇಲೀಸರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಘಟನೆ ನಡೆದ ಬಳಿಕ ಆರೋಪಿಯನ್ನ ಕೆಜಿಎಫ್ ಜೈಲಿನಲ್ಲಿ ಭೇಟಿ ಮಾಡಿದ್ದಾಗಿ ತಿಳಿಸಿದ ಜಿಲ್ಲಾಧಿಕಾರಿ, ಆರೋಪಿ ವೆಂಕಟಾಪತಿಯನ್ನ ಕೇಳಿದಾಗ, ಎರಡು ಕೈಯನ್ನು ಮೇಲಕ್ಕೆತ್ತಿ ಗೊತ್ತಿಲ್ಲದೆ ತಪ್ಪಾಗಿದೆ ಕ್ಷಮಿಸಿ ಎಂದರಂತೆ.
ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ರಕ್ಷಣಾ ವೈಫಲ್ಯವೇ ನೇರ ಕಾರಣ ಎಂದಿರುವ ಅವರು, ಘಟನೆ ಎಲ್ಲರಿಗೂ ತಿಳಿದಿರುವ ವಿಚಾರ. ಇಂದು, ನಾಳೆ, ಮುಂದೆಯು ನಾನು ಇದೇ ಮಾತನ್ನ ಹೇಳುವೆ. ನ್ಯಾಯ ಸಿಗುವುದು ತಡವೇ ಆದರೂ, ನ್ಯಾಯ ಸಿಕ್ಕೇ ಸಿಗುವ ವಿಶ್ವಾಸವನ್ನ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕೊಲೆ ನಡೆಯುವ ವೇಳೆ ಸ್ಥಳದಲ್ಲಿ ಪೇದೆಗಳಿದ್ದರೂ, ಇನ್ಸ್ಪೆಕ್ಟರ್ ಇರಲಿಲ್ಲ. ಅಷ್ಟಕ್ಕೂ ಅಂದು ಕೂಗಾಟ ನಡೆಯುತ್ತಿರುವಾಗ ವೆಂಕಟಾಪತಿ ರಂಪಾಟ ಕಡಿಮೆ ಮಾಡಲು ಪೊಲೀಸರು ಎಚ್ಚರಿಕೆ ನೀಡಿದ್ದರೆ ಪರಿಸ್ಥಿತಿ ಬೇರೆಯೆ ಇರುತ್ತಿತ್ತು. ಹೀಗಾಗಿ ಪೊಲೀಸರ ವೈಫಲ್ಯದಿಂದಲೇ ಕೊಲೆ ನಡೆದಿದೆ ಎಂಬುದು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳ ವಾದವಾಗಿದೆ.








