ಕಲಬುರ್ಗಿ: ಶರಣರ ನಾಡು ಕಲಬುರ್ಗಿಯಲ್ಲಿ ಕುಖ್ಯಾತ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಕಲಬುರ್ಗಿ ಹೊರವಲಯದ ಕೆಸರಟಗಿ ಗ್ರಾಮದ ಬಳಿ ರೌಡಿಶೀಟರ್ ಫಯೀಂ ಬೇಗ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಆತನ ಕಾಲಿಗೆ ಎರಡು ಗುಂಡುಗಳು ತಾಗಿವೆ.

ಫಯೀಂ ವಿರುದ್ಧ ಕಲಬುರ್ಗಿಯ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಹೈದರಾಬಾದ್ ನಲ್ಲಿಯೂ ಹಲವು ಅಪರಾಧ ಪ್ರಕರಣಗಳಲ್ಲಿ ಫಯೀಂ ಭಾಗಿಯಾಗಿದ್ದ. ಆತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಶೀಟರ್ ಫಯೀಂ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಾಳು ಫಯೀಂನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಫೈರಿಂಗ್ ವೇಳೆ ಮುಖ್ಯಪೇದೆ ಅಂಬಾದಾಸ್ ಮತ್ತು ಪೇದೆ ರಫೀಕ್ ಗೆ ಗಾಯವಾಗಿದೆ. ಗಾಯಗೊಂಡ ಪೊಲೀಸರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









