ಬೆಂಗಳೂರು : ನನ್ನ ಜಾತಿ ಮತ್ತು ಜನ್ಮ ಸ್ಥಳದ ಕುರಿತು ಮಾಜಿ ಸಚಿವ ಹೆಚ್. ಆಂಜನೇಯ ಮಾಡಿದ ಆರೋಪಗಳು ನಿರಾಧಾರ. ನಾನು ಸುಳ್ಳು, ಮೋಸದಿಂದ ಜಾತಿ, ಜನ್ಮ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೇ ಅದೇ ಕ್ಷಣ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಭು ಚವ್ಹಾಣ್ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಜಾತಿ ಮತ್ತು ಜನ್ಮ ಸ್ಥಳದ ಕುರಿತು ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿವೆ.
ಆಂಜನೇಯ ಅವರಿಗೆ ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ಸ್ವತಃ ವಾಸ್ತವ ಏನೆಂಬುದು ತಿಳಿದುಕೊಳ್ಳಲಿ.
ನಾನು ಸುಳ್ಳು, ಮೋಸದಿಂದ ಜಾತಿ, ಜನ್ಮ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ಅದೇ ಕ್ಷಣ ರಾಜಕೀಯದಿಂದ ನಿವೃತ್ತಿ ಪಡೆಯುವೆ. ಒಂದು ವೇಳೆ ಇದು ಸುಳ್ಳು ಎಂದಾದರೆ ಅವರು ಬಹಿರಂಗವಾಗಿ ಕ್ಷಮೆ ಕೋರಲಿ ಎಂದು ಒತ್ತಾಯಿಸಿದ್ದಾರೆ.
ನಾನು ಮೂಲತಃ ಕರ್ನಾಟಕದವನು. ನಾನು ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ನಾನು ಪರಿಶಿಷ್ಟ ಜಾತಿಯ(ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ.
ಆದರೆ ಆಂಜನೇಯ ಅವರು ವಾಸ್ತವ ಅರಿಯದೆ ಹಾಗೂ ಯಾರೋ ಕುತಂತ್ರಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಂಬಿ ನಾನು ಮಹಾರಾಷ್ಟ್ರದವ ಎಂದು ಜಾತಿಗೆ ಸೇರಿದವನಲ್ಲ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಸಮಾಜದ ಹಿರಿಯ ನಾಯಕರೆನಿಸಿಕೊಂಡ ಆಂಜನೇಯ ಅವರಿಂದ ಇಂತಹ ತಪ್ಪು ಹೇಳಿಕೆ ಬಂದಿರುವುದು ಅಚ್ಚರಿ ತಂದಿದೆ ಎಂದು ತಿಳಿಸಿದ್ದಾರೆ.
ನನ್ನ ಜಾತಿ ಹಾಗೂ ಜನ್ಮ ಸ್ಥಳದ ಕುರಿತು ಯಾವುದೇ ವಿವಾದವಿಲ್ಲ. ಆದರೆ ಕೆಲವರು ಮೇಲಿಂದ ಮೇಲೆ ಈ ವಿಷಯವನ್ನು ಕೆದಕಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.
ಮೂರನೇ ಸಲ ಔರಾದ್ ಕ್ಷೇತ್ರದ ಶಾಸಕನಾಗಿ, ಕಳೆದ ಒಂದು ವರ್ಷದಿಂದ ಸಚಿವನಾಗಿ ಮಾಡುತ್ತಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ.
ಇದನ್ನು ಸಹಿಸದೆ ಈ ರೀತಿ ಸುಳ್ಳು ವಿಷಯ ಪ್ರಸ್ತಾಪಿಸಿ ನನಗೆ ಮಾನಸಿಕ ಹಿಂಸೆ ನೀಡಲು ಪ್ರಯತ್ನಿಸುತ್ತಿದ್ದಾರೆ. ನಾನು ಇದ್ಯಾವುದಕ್ಕೂ ಜಗ್ಗುವವನಲ್ಲ. ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಅವಿರತ ಕೆಲಸ ಮುಂದುವರಿಸಿದ್ದೇನೆ ಎಂದು ಪ್ರಭು ಹೇಳಿದ್ದಾರೆ.








