ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಕೋವಿಡ್ ಬಂದವರಿಗೆ ಹೃದಯಾಘಾತದ ಅಪಾಯ ಹೆಚ್ಚಾಗಿದೆ
ಸಮೀಕ್ಷೆ ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ಒಳಪಟ್ಟ ಕೆಲವೊಂದು ಪ್ರಕರಣಗಳಲ್ಲಿ ಸೋಂಕು ಹಾದುಹೋದ ನಂತ್ರ ವ್ಯಕ್ತಿಗಳಿಗೆ ಹೃದಯಾಘಾತವಾಗಿರುವುದು ವರದಿಯಾಗಿದೆ. ಇದು ವೈದ್ಯಕೀಯವಾಗಿ ದೃಢಪಟ್ಟಿರುವ ವಿಚಾರ ಎಂದಿದ್ದಾರೆ.
ಲಸಿಕೆಯಿಂದ ಹೃದಯಾಘಾತ ಅಲ್ಲ
ಇತ್ತೀಚೆಗೆ ಜನರಲ್ಲಿ ಲಸಿಕೆಗಳ ಬಗ್ಗೆ ಅನಗತ್ಯ ಭಯವಿದೆ. ವಿಶೇಷವಾಗಿ ಹೃದಯಾಘಾತಕ್ಕೆ ಲಸಿಕೆಯನ್ನು ಕಾರಣವಾಗಿಸಿ ಅಪಪ್ರಚಾರ ನಡೆಯುತ್ತಿದೆ. ಆದರೆ ಇತ್ತೀಚಿನ ಆರೋಗ್ಯ ವರದಿಗಳ ಪ್ರಕಾರ, MRNA ಲಸಿಕೆಗಳ ಕುರಿತು ಕೆಲವೊಂದು ಅನುಮಾನಗಳು ಇದ್ದರೂ, ಭಾರತದಲ್ಲಿ ಬಹುತೇಕವಾಗಿ ಬಳಸಿದ ಕೋವಿಡ್ ಲಸಿಕೆಗಳು ಜನರಿಗೆ ಸುರಕ್ಷಿತವಾಗಿದ್ದು, ಉಪಯುಕ್ತವೂ ಆಗಿವೆ ಎಂದು ಅವರು ಸ್ಪಷ್ಟಪಡಿಸಿದರು.
ಲಸಿಕೆ ಜನರ ರಕ್ಷಣೆಗೆ ಸಹಾಯಕ
ದಿನೇಶ್ ಗುಂಡೂರಾವ್ ಅವರು ಮುಂದುವರೆದು, ಕೋವಿಡ್ ಮಹಾಮಾರಿ ಸಮಯದಲ್ಲಿ ನಮ್ಮ ಸರ್ಕಾರವು ಲಸಿಕೆಯನ್ನು ವ್ಯಾಪಕವಾಗಿ ನೀಡಿದ ಪರಿಣಾಮ, ಸಾವಿರಾರು ಮಂದಿ ಸೋಂಕಿನಿಂದ ಗಂಭೀರ ಸ್ಥಿತಿಗೆ ತಲುಪದೆ ಪಾರಾಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಲಸಿಕೆಯಿಂದಾಗಿ ನಮ್ಮ ಜನರ ಜೀವ ಉಳಿಯುವಂತಾಗಿದೆ. ಆದರೆ, ಕೋವಿಡ್ನ ಹೊತ್ತಿನಲ್ಲಿ ಅಥವಾ ಬಳಿಕ ಏರ್ಪಟ್ಟ ಆರೋಗ್ಯ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ತಕ್ಷಣದ ನಿರ್ಣಯ ಕೈಗೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಹೃದಯಾಘಾತ ಸಾವುಗಳ ಪರಿಶೀಲನೆ ಮುಂದುವರೆಯಲಿದೆ
ರಾಜ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಹೃದಯಾಘಾತ ಪ್ರಕರಣಗಳ ಪತ್ತೆ, ಅವುಗಳ ಹಿಂದಿರುವ ಕಾರಣಗಳ ಪರಿಶೀಲನೆ ಹಾಗೂ ಮುಂದಿನ ತಡೆಯ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶೀಲನೆ ನಡೆಸಲಿದೆ ಎಂದು ಸಚಿವರು ತಿಳಿಸಿದರು.








