ದೇಶಕ್ಕೆ ಕೊರೊನಾ ಎಂಟ್ರಿ ಕೊಟ್ಟಾಗಿಂದಲೂ ಎಲ್ಲರ ಚಿತ್ತ ಬದಲಾಗಿದೆ. ರಾಜಕೀಯ ನಾಯಕರು ರಾಜಕೀಯ ಬಿಟ್ಟು ಪ್ರಾಣ ಉಳಿಸಿಕೊಳ್ಳುವ ಹಾಗೂ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಮಧ್ಯೆ ಕೊರೊನಾ ಸೋಂಕಿತರನ್ನು ಪರೀಕ್ಷಿಸುವ ಹಾಗೂ ಅವರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಧರಿಸುವ ಗೌನ್ ಗಳ ಬಣ್ಣಕ್ಕೆ ಸಂಬಂಧಿಸಿದಂತೆ ಇದೀಗ ರಾಜಕಾರಣದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಹೇಳಿದ್ದೇನು?
ಸಾಮಾನ್ಯವಾಗಿ ವೈದ್ಯರು ಹಾಗೂ ನರ್ಸ್ ಗಳು ಇಡೀ ದೇಹವನ್ನು ಆವರಿಸುವಂತೆ ಧರಿಸುವ ಡ್ರೆಸ್ ಗಳನ್ನು ನೀಲಿ, ಬಿಳಿ, ಬೂದು ಬಣ್ಣಗಳಲ್ಲಿ ತಯಾರಿಸಲಾಗುತ್ತದೆ. ಇದಕ್ಕೆ ಹೊರತಾಗಿ ಕೆಲವೊಮ್ಮೆ ಗುಲಾಬಿ ಬಣ್ಣದ ಪಿಪಿಇಗಳು ಕಾಣ ಸಿಗುತ್ತವೆ. ಆದರೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಕಳುಹಿಸುತ್ತಿರುವ ಪಿಪಿಇಗಳ ಬಣ್ಣ ಹಳದಿಯಾಗಿದೆ. ಯಾಕೆ ಈ ಬಣ್ಣವನ್ನು ಆರಿಸಿಕೊಂಡಿದೆ ಎನ್ನುವುದು ನನಗೆ ಇನ್ನೂ ಕೂಡ ತಿಳಿಯುತ್ತಿಲ್ಲ. ಆದರೆ ಈ ಬಗ್ಗೆ ನಾನು ಅರಿತುಕೊಳ್ಳುತ್ತೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.








