Prahlad Joshi – ಭಾರತೀಯ ಪರಂಪರೆಯನ್ನು ವಿರೋಧ ಮಾಡುವುದೇ ಕಾಂಗ್ರೆಸ್ ಕೆಲಸ
ಧಾರವಾಡ : ಶಾಲಾ ಮಕ್ಕಳಿಗೆ ಧ್ಯಾನ ಮಾಡಿಸುವ ಮೂಲಕ ಹಿಂದುತ್ವ ಹೇರುತ್ತಿದ್ದಾರೆ ಎಂಬುದು ಸುಳ್ಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಶಾಲಾ – ಕಾಲೇಜುಗಳಲ್ಲಿ ಧ್ಯಾನ ಮಾಡಿಸುವ ಬಗ್ಗೆ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ನಲ್ಲಿ “ಯೋಗ-ಧ್ಯಾನ ಯಾವುದಕ್ಕೂ ನನ್ನ ವಿರೋಧ ಇಲ್ಲ. ಆದರೆ ಶಾಲೆಗಳಲ್ಲಿ ಯಾವುದು ಮುಖ್ಯ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಯಾವುದಕ್ಕೆ ಆದ್ಯತೆ ನೀಡಬೇಕೆನ್ನುವುದಷ್ಟೇ ಪ್ರಶ್ನೆ. ಒಂದೆಡೆ ಶಾಲೆ ನಡೆಸಲು ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿರುವ ಬಿಜೆಪಿ ಸರ್ಕಾರ ಇನ್ನೊಂದೆಡೆ ದಿನಕ್ಕೊಂದರಂತೆ ಗಿಮಿಕ್ ಗಳನ್ನು ಮಾಡುತ್ತಿರುವುದು ಖಂಡನೀಯ ಎಂದಿದ್ದರು.

ಇದಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರಿಗೆ ಧ್ಯಾನ ಎಂದರೆ ಏನು ಅಂತಾನೇ ಗೊತ್ತಿಲ್ಲ. ಅವರಿಗೆ ಕೇವಲ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯೇ ಧ್ಯಾನ ಇದ್ದಂತೆ ಇದೆ. ಶಾಲೆಗಳಲ್ಲಿ ಇಂತದ್ದೇ ದೇವರ ಧ್ಯಾನ ಮಾಡಿ ಅಂತಾ ಎಂದೂ ಹೇಳಿಲ್ಲ. ಕಾಂಗ್ರೆಸ್ ನವರು ಭಗವದ್ಗೀತೆಯನ್ನೂ ವಿರೋಧಿಸುತ್ತಾರೆ. ಒಂದು ಸಮಾಜದ ತುಷ್ಟೀಕರಣ ಮಾಡುವುದಕ್ಕೆ ಏನು ಬೇಕಾಗಿದೆಯೋ ಅದನ್ನೆಲ್ಲ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಡೀ ಜಗತ್ತು ಯೋಗ ಒಪ್ಪಿಕೊಂಡ ಮೇಲೆ ಕಾಂಗ್ರೆಸ್ ನವರು ಯೋಗ ಒಪ್ಪಿಕೊಳ್ಳುತ್ತಿದ್ದಾರೆ. ಭಾರತೀಯ ಪರಂಪರೆಯನ್ನು ವಿರೋಧ ಮಾಡುವುದೇ ಕಾಂಗ್ರೆಸ್ ನವರ ಕೆಲಸ ಎಂದು ಕಿಡಿಕಾರಿದರು.








