ಬೆಂಗಳೂರು : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಜಕೀಯ ವೈರಿಗಳು ಇರಬಹುದು, ಆದರೆ ಶತ್ರು ಇರಲಿಲ್ಲ. ಎಲ್ಲ ಪಕ್ಷದವರೂ ಗೌರವಿಸುತ್ತಿದ್ದರು, ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಪ್ರಣಬ್ ಮುಖರ್ಜಿ ಅವರಿಗೆ ಕರ್ನಾಟಕದ ಬಗ್ಗೆ ಅಪಾರ ಪ್ರೀತಿ ಇತ್ತು. ಯಾವಾಗ ಬೇಕಾದರೂ ಸಲಹೆ ಸೂಚನೆ ಕೊಡುತ್ತಿದ್ದರು. ನಾನು ಅನೇಕ ಬಾರಿ ರಾಷ್ಟ್ರಪತಿ ಅಂಕಿತಕ್ಕೆ ಅವರನ್ನು ಭೇಟಿ ಮಾಡಿದಾಗ ಅಂಕಿತ ಹಾಕಿಕೊಡುತ್ತಿದ್ದರು. ಸದಾ ಪ್ರಗತಿಪರ ನಿಲುವು ಹೊಂದಿದ್ದರು. ಅವರು ಅರ್ಥ ಶಾಸ್ತ್ರಜ್ಞರು ಅಲ್ಲದೇ ಹೋದರೂ ಜಗತ್ತಿನ ಶ್ರೇಷ್ಠ ಐವರು ಹಣಕಾಸು ಮಂತ್ರಿಗಳಲ್ಲಿ ಅವರೊಬ್ಬರು. ಓದು ಅನುಭವ ಮೂಲಕ ಜ್ಞಾನ ಸಂಪಾದಿಸಿದ್ದರು. ಪ್ರಣಬ್ ಅವರಿಗೆ ಪ್ರಧಾನಿ ಆಗುವ ಸಾಮಥ್ರ್ಯ ಇತ್ತು, ಆದರೆ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಣಬ್ ಅವರು ಆರ್ ಎಸ್ ಎಸ್ ಶಿಬಿರದಲ್ಲಿ ಭಾಗಿಯಾಗಿದ್ದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಆರ್ ಎಸ್ ಎಸ್ ಶಿಬಿರದಲ್ಲಿ ಪ್ರಣಬ್ ಮುಖರ್ಜಿ ಭಾಷಣ ಮಾಡಿದ್ದು ಯಕ್ಷ ಪ್ರಶ್ನೆ. ರಾಷ್ಟ್ರಪತಿ ಸ್ಥಾನದಿಂದ ಇಳಿದ ಕೂಡಲೇ ಅವರು ಅಲ್ಲಿಗೆ ಹೋಗಿದ್ದು ಸರಿಯಲ್ಲ. ಆರ್ ಎಸ್ ಎಸ್ ಕೋಮುವಾದಿ ಸಂಘಟನೆ. ಇಡೀ ಜೀವನ ಕಾಂಗ್ರೆಸ್ ನಲ್ಲೇ ಕಳೆದ ಪ್ರಣಬ್ ಮುಖರ್ಜಿ ಅವರು ಆರ್ ಎಸ್‍ಎಸ್ ಶಿಬಿರಕ್ಕೆ ಹೋಗಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.








