ಪಿಟಿಇಯನ್ನು ದೇಶ ವಿರೋಧಿ ಎಂದು ಟೀಕಿಸಿದ ಪ್ರಸಾರ ಭಾರತಿ
ಹೊಸದಿಲ್ಲಿ, ಜೂನ್ 28: ಖಾಸಗಿಯಾಗಿ ನಡೆಸುತ್ತಿರುವ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಇ)ಯನ್ನು ದೇಶ ವಿರೋಧಿ ಎಂದು ಟೀಕಿಸಿರುವ ಪ್ರಸಾರ ಭಾರತಿ ನಿಮ್ಮೊಂದಿಗಿನ ಚಂದಾದಾರಿಕೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದೆ ಎಂದು ವರದಿಗಳು ತಿಳಿಸಿವೆ.
ಪ್ರಸಾರ ಭಾರತಿಯು ಪಿಟಿಇ ಸುದ್ದಿ ಸಂಸ್ಥೆಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದು, ರಾಷ್ಟ್ರ ವಿರೋಧಿ ವರದಿಗಾರಿಕೆಯ ಬಳಿಕ ಒಪ್ಪಂದವು ಪರಿಶೀಲನೆಯಲ್ಲಿದೆ ಎಂದು ಪ್ರತಿಪಾದಿಸಿರುವುದಾಗಿ ವರದಿಗಳು ತಿಳಿಸಿವೆ.

ಲಡಾಖ್ ಗಡಿ ಪ್ರದೇಶದಲ್ಲಿನ ಘರ್ಷಣೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಸಮಯದಲ್ಲಿ ಪಿಟಿಐ ಸುದ್ದಿ ಸಂಸ್ಥೆ ಚೀನಾ ರಾಯಭಾರಿ ಸನ್ ವೇಯ್ಡಾಂಗ್ ಅವರ ಸಂದರ್ಶನ ನಡೆಸಿತ್ತು. ಅಷ್ಟೇ ಅಲ್ಲ ಭಾರತವನ್ನು ಟೀಕಿಸಿದ್ದ ಚೀನಾ ರಾಯಭಾರಿಯ ಹೇಳಿಕೆಗಳನ್ನು ಕೂಡ ಪ್ರಕಟಿಸಲಾಗಿತ್ತು. ಪ್ರಸಾರ ಭಾರತಿ ಪಿಟಿಐನ ಈ ನಡೆಯನ್ನು ವಿರೋಧಿಸಿದ್ದು, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ವನ್ನು ದೇಶ ವಿರೋಧಿ ಎಂದು ಕರೆದಿದ್ದು, ಪಿಟಿಐ ಜೊತೆಗಿನ ಎಲ್ಲ ರೀತಿಯ ವ್ಯವಹಾರವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದೆ.
ಪಿಟಿಐ ನಡೆಸಿದ್ದ ಸಂದರ್ಶನದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಪ್ರಸಾರ ಭಾರತಿಯು ಪಿಟಿಐ ಸಂಪಾದಕೀಯ ವರ್ಗದವರೊಂದಿಗೆ ಮಾತನಾಡಿದ್ದು, ಪಿಟಿಐ ನಡೆಯನ್ನು ತೀವ್ರವಾಗಿ ವಿರೋಧಿಸಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಜೂನ್ 25ರಂದು ಪ್ರಸಾರವಾಗಿದ್ದ ಸಂದರ್ಶನದಲ್ಲಿ ಚೀನಾ ರಾಯಭಾರಿ ಗಾಲ್ವಾನ್ ಘರ್ಷಣೆಗೆ ಭಾರತವೇ ಕಾರಣ. ಇದರಲ್ಲಿ ಚೀನಾ ಯಾವ ತಪ್ಪೇ ಮಾಡಿಲ್ಲ ಎನ್ನುವಂತೆ ಮಾತನಾಡಿದ್ದರು. ಈ ಹಿನ್ನಲೆಯಲ್ಲಿ ಅವರ ಸಂದರ್ಶನವನ್ನು ಪ್ರಸಾರ ಮಾಡುವ ಮೂಲಕ ಪರೋಕ್ಷವಾಗಿ ಪಿಟಿಐ ಚೀನಾವನ್ನು ಬೆಂಬಲಿಸಿದೆ ಎಂದು ಪ್ರಸಾರ ಭಾರತಿ ಅಸಮಾಧಾನ ವ್ಯಕ್ತಪಡಿಸಿದ್ದು, ಪಿಟಿಐ ಸಂದರ್ಶವನ್ನು ದೇಶ ವಿರೋಧಿ ವರದಿಗಾರಿಕೆ ಎಂದು ಟೀಕಿಸಿದೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲ ಈ ಸಂದರ್ಶನದ ಬೆನ್ನಲ್ಲೇ ಚೀನಾ ರಾಯಭಾರಿ ಟ್ವೀಟ್ ಮಾಡಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ ಪಾತ್ರವಿಲ್ಲ. ಇದಕ್ಕೆಲ್ಲಾ ಭಾರತವೇ ಸಂಪೂರ್ಣ ಹೊಣೆ. ನಾವು ಇಂದಿಗೂ ಭಾರತದ ಜೊತೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತೇವೆ ಎಂದು ಬರೆದಿದ್ದರು.
ಸರ್ಕಾರಿ ಮೂಲಗಳು ತಿಳಿಸಿರುವಂತೆ ಖಾಸಗಿ ಸುದ್ದಿ ಸಂಸ್ಥೆ ಪಿಟಿಐಯು, ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯಿಂದ ಸಾಕಷ್ಟು ಪ್ರಮಾಣದ ಆರ್ಥಿಕ ನೆರವನ್ನು ಪಡೆಯುತ್ತಿದ್ದು, ದಶಕಗಳಿಂದಲೂ ಪ್ರಸಾರ ಭಾರತಿ ಪಿಟಿಐಗೆ ಕೋಟ್ಯಂತರು ರೂಪಾಯಿಗಳ ಆರ್ಥಿಕ ನೆರವು ನೀಡುತ್ತಾ ಬಂದಿದೆ ಎನ್ನಲಾಗಿದೆ. ಗಾಲ್ವಾನ್ ಮಾತ್ರವಲ್ಲದೆ ಪಿಟಿಐನ ಇತರೆ ಕಾರ್ಯವೈಖರಿಯೂ ಬಗ್ಗೆಯೂ ಪ್ರಸಾರಭಾರತಿ
ಅಸಮಾಧಾನಗೊಂಡಿದ್ದು, ಈ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಪಿಟಿಐ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.








