ಉಗ್ರಂ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಕ್ಸಸ್ ಕಂಡಿದ್ದ ಪ್ರಶಾಂತ್ ನೀಲ್, ಕೆಜಿಎಫ್ ಚಿತ್ರದ ಮೂಲಕ ಭಾರತೀಯ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಕೆಜಿಎಫ್ ಸಿನಿಮಾದ ಮೂಲಕ ತಮ್ಮ ನಿರ್ದೇಶನದ ತಾಕತ್ತನ್ನ ಇಂಡಿಯನ್ ಸಿನಿ ದುನಿಯಾಗೆ ತೋರಿಸಿಕೊಟ್ಟ ಪ್ರಶಾಂತ್ ನೀಲ್ ಗೆ ಅಕ್ಕಪಕ್ಕದ ಇಂಡಸ್ಟ್ರಿಗಳಿಂದಲೂ ದೊಡ್ಡ ಆಫರ್ಸ್ ಹುಡುಕಿ ಬರ್ತಿವೆ.
ಸದ್ಯ ಕೆಜಿಎಫ್ -2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾ ಯಾವುದಾಗಿರಬಹುದೆಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಇದರ ಇತ್ತೀಚೆಗೆ ಮಧ್ಯೆ ಜೂನಿಯರ್ ಎನ್ ಟಿಆರ್ ಜೊತೆಗೆ ಪ್ರಶಾಂತ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಇದೀಗ ತಾರಕ್ ಜೊತೆ ಸಿನಿಮಾ ಮಾಡುವ ಬಗ್ಗೆ ಪ್ರಶಾಂತ್ ಸುಳಿವು ನೀಡಿದ್ದಾರೆ.
ಇಂದು ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬ ಹಿನ್ನಲೆ, ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ..
ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದಲ್ಲಿ ಕುಳಿತರೆ ಹೇಗಿರುತ್ತೆ ಅನ್ನೋದು ನನಗೆ ಕೊನೆಗೂ ಗೊತ್ತಾಯ್ತು. ಇಂಥ ಕ್ರೇಜಿ ಎನರ್ಜಿಯ ಸುತ್ತ ಇರಲು ಮುಂದಿನ ಸಲ ನನ್ನ ರೇಡಿಯೇಷನ್ ಸೂಟ್ ಸಮೇತ ಬರ್ತೀನಿ. ಹ್ಯಾಪಿ ಬರ್ತ್ ಡೇ ಬ್ರದರ್, ಆದಷ್ಟು ಬೇಗ ಭೇಟಿಯಾಗೋಣ ಅಂತ ಬರೆದುಕೊಂಡಿದ್ದಾರೆ ಪ್ರಶಾಂತ್ ನೀಲ್. ಈ ಟ್ವೀಟ್ ಮೂಲಕ ತಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಸುಳಿವು ಕೊಟ್ಟಿದ್ದಾರೆ.
ಮೂಲಗಳ ಪ್ರಕಾರ ಮೈತ್ರಿ ಮೂವೀಸ್ ಬ್ಯಾನರ್ ಪ್ರಶಾಂತ್ ನೀಲ್, ತಾರಕ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಈಗಾಗಲೇ ಪ್ರಶಾಂತ್ ನೀಲ್ ಗೆ 2 ಕೋಟಿ ಅಡ್ವಾನ್ಸ್ ಪೇಮೆಂಟ್ ಕೊಟ್ಟಿದೆಯಂತೆ.
ಇನ್ನು ಪ್ರಶಾಂತ್ ನೀಲ್ ಈ ರೀತಿಯಾಗಿ ಟ್ವೀಟ್ ಮಾಡುತ್ತಿದ್ದಂತೆ ಇಬ್ಬರ ಅಭಿಮಾನಿಗಳೂ ಫುಲ್ ಖುಷ್ ಆಗಿದ್ದಾರೆ. ಇಬ್ಬರ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಾಜಮೌಳಿ, ಪ್ರಶಾಂತ್ ನೀಲ್ ಹೀಗೆ ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿರುವ ಜೂ.ಎನ್.ಟಿ.ಆರ್ ಮೇಲೆ ನಿರೀಕ್ಷೆ ಸಹ ದುಪ್ಪಟ್ಟಾಗಿದೆ. ಪ್ರಶಾಂತ್ ನೀಲ್ ಈ ವಿಚಾರ ಬಹಿರಂಗ ಪಡಿಸುತ್ತಿದ್ದಂತೆ ಅಭಿಮಾನಿಗಳು ‘ಇಬ್ಬರ ಕಾಂಬಿನೇಷನ್ ನೋಡಲು ಕಾಯುತ್ತಿದ್ದೇವೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಟ್ವೀಟ್ ನಲ್ಲಿ ಇದ್ಯಾ ಕಥೆಯ ಸುಳಿವು..?
ತಾರಕ್ ಬರ್ತ್ ಡೇ ಗೆ ವಿಶ್ ಮಾಡಲು ಪ್ರಶಾಂತ್ ನೀಲ್ ಮಾಡಿರುವ ಟ್ವೀಟ್ ನಲ್ಲಿ ಸಿನಿಮಾದ ಸ್ಟೋರಿಯ ಸುಳಿವು ನೀಡಿದ್ರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಯಾಕೆಂದರೆ ನೀಲ್ ತಮ್ಮ ಟ್ವೀಟ್ ನಲ್ಲಿ.. ನ್ಯೂಕ್ಲಿಯರ್ ಪ್ಲಾಂಟ್… ಕ್ರೇಜಿ ಎನರ್ಜಿ.. ನನ್ನ ರೇಡಿಯೇಷನ್ ಸೂಟ್ ಎಂಬ ಪದಗಳನ್ನು ಬಳಕೆ ಮಾಡಿದ್ದಾರೆ.
ಇವುಗಳನ್ನು ವಿಶ್ಲೇಷಿಸುತ್ತಾ ನೋಡಿದರೇ… ತಾರಕ್ ಗೆ ಬಳಕೆ ಮಾಡಿರುವ ನ್ಯೂಕ್ಲಿಯರ್ ಪ್ಲಾಂಟ್, ಕ್ರೇಜಿ ಎನರ್ಜಿ ಪದಗಳು ಎನ್ ಟಿಆರ್ ರ ಮಾಸ್ ಇಮೇಜ್ ಅನ್ನು ಗುರುತು ಮಾಡುತ್ತೆ. ಸಾಮಾನ್ಯವಾಗಿ ತಾರಕ್ ಮಾಸ್ ಹೀರೋ.. ತಮ್ಮ ಸಿನಿಮಾಗಳಲ್ಲಿ ನ್ಯೂಕ್ಲಿಯರ್ ಪ್ಲಾಂಟ್ ನಂತಹ ಪವರ್ ಇರುತ್ತೆ. ಇನ್ನು ಎನರ್ಜಿಗೆ ಮತ್ತೊಂದು ಹೆಸರೇ ಎನ್ ಟಿಆರ್.
“ನನ್ನ ರೇಡಿಯೇಷನ್ ಸೂಟ್ ಸಮೇತ ಬರ್ತೀನಿ” ಅನ್ನೋದರ ಮೂಲಕ ನೇರವಾಗಿಯೇ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುವ ಬಗ್ಗೆ ಟ್ವೀಟ್ ನಲ್ಲಿ ಸುಳಿವು ನೀಡಿದ್ದಾರೆ ಪ್ರಶಾಂತ್ ನೀಲ್. ಯಾಕೆಂದರೆ ಪ್ರಶಾಂತ್ ಅವರ ಈ ಹಿಂದಿನ ಸಿನಿಮಾಗಳು ಪಕ್ಕಾ ಔಟ್ ಅಂಡ್ ಔಟ್ ಮಾಸ್ ಎಂಟರ್ ಟೈನರ್ ಗಳಾಗಿವೆ. ನೀಲ್ ಅವರ ಸಿನಿಮಾಗಳಲ್ಲಿ ಎಮೋಷನ್ಸ್ ಬಹು ಮುಖ್ಯ ಪಾತ್ರ ವಹಿಸಿರುತ್ತೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡೊದಾದ್ರೆ.. ತಾರಕ್ – ನೀಲ್ ಕಾಂಬಿನೇಷನ್ ನಲ್ಲಿ ಒಂದು ಹೀರೋ ಒರಿಯಂಟೇಡ್ ಪಕ್ಕಾ ಮಾಸ್ ಸಿನಿಮಾ ಬರಲಿದೆ ಅನ್ನೋದು ನೂರಕ್ಕೆ ನೂರರಷ್ಟು ಪಕ್ಕಾ.
ಯಾವಾಗ ಸೆಟ್ಟೇರಲಿದೆ ಸಿನಿಮಾ?
ಪ್ರಶಾಂತ್ ನೀಲ್ ಸದ್ಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಾರಕ್ ರಾಮ್, ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರಗಳಾಗಿವೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಪ್ರಶಾಂತ್ ನೀಲ್ ಮತ್ತು ತಾರಕ್ ರಾಮ್ ಸಿನಿಮಾ ಸೆಟ್ಟೇರಲಿದೆ.







