ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಒಳಗುಟ್ಟುಗಳು ಒಂದೊಂದಾಗಿ ಹೊರಬರುತ್ತಿದ್ದು, ಇಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ನಟಿ ಹಾಗೂ ಡ್ರಗ್ಸ್ ಕೇಸ್‍ನ ಆರೋಪಿ ಸಂಜನಾ ಗಲ್ರಾನಿ, ಶಾಸಕ ಜಮೀರ್ ಅಹಮದ್ ಜತೆ ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ರು ಎಂದು ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ದಾಖಲೆಗಳಿದ್ದರೆ ಹಂಚಿಕೊಳ್ಳುವಂತೆ ಸಿಸಿಬಿ ಪೊಲೀಸರು ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿದ್ದರು.
ನೋಟಿಸ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಶಾಸಕ ಜಮೀರ್ ಅಹಮದ್ ವಿರುದ್ಧ ಮಾಡಿದ ಆರೋಪ ಹಿನ್ನೆಲೆಯಲ್ಲಿ ಸಂಬರಗಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಆಗಿದೆ. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಪ್ರಶಾಂತ್ ಸಂಬರಗಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ಯಾರ ಯಾರ ಜಾತಕ ಬಿಚ್ಚಿಡುತ್ತಾರೋ ಎಂಬ ಆತಂಕ ಮಾಫಿಯಾ ನಂಟಿದ್ದವರಿಗೆ ಶುರುವಾಗಿದೆ.
ಹಾಗಾದರೆ ಪ್ರಶಾಂತ್ ಸಂಬರಗಿ ಯಾವ ದಾಖಲೆ ನೀಡ್ತಾರೆ ?
ಸಂಬರಗಿ ವಿಚಾರಣೆಯಿಂದ ರಾಜಕಾರಣಿಗಳು ಮತ್ತು ಅವರ ಮಕ್ಕಳಿಗೆ ಕುತ್ತು ತರುತ್ತಾ ? ಶಾಸಕರ ಆಪ್ತ ಫಾಸಿಲ್ ಬಗ್ಗೆ ದಾಖಲೆ ಕೊಡ್ತಾರಾ ? ಸಂಜನಾ-ಜಮೀರ್ ಶ್ರೀಲಂಕಾಕ್ಕೆ ಹೋದ ದಾಖಲೆ ಕೊಡ್ತಾರಾ? ಸ್ಯಾಂಡಲ್‍ವುಡ್, ಬಾಲಿವುಡ್ ನಟ-ನಟಿಯರ ಡ್ರಗ್ಸ್ ಲಿಂಕ್ ಬಗ್ಗೆ ಸಿಸಿಬಿಗೆ ಮಾಹಿತಿ ಕೊಡ್ತಾರಾ? ಸಂಬರಗಿ ಬಳಿ ಇದೆಯಾ ಸ್ಫೋಟಕ ಮಾಹಿತಿ ಹಾಗೂ ಸಾಕ್ಷ್ಯ..ಇತ್ಯಾದಿ ಚರ್ಚೆಗಳು ಶುರುವಾಗಿವೆ.
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿರುವ ಪ್ರಶಾಂತ್ ಸಂಬರಗಿ, ನಾನು ಸ್ಫೋಟಕ ಮಾಹಿತಿ ಬಗ್ಗೆ ಒಗಟಾಗಿ ಹೇಳಿದ್ದೇನೆ.
1. ಅದು ಕರ್ನಾಟಕದಿಂದ ಮುಂಬೈ ಸೊಸೆಯಾಗಿ ಒಬ್ಬರು ತೆರಳಿದ್ದಾರೆ. ಮಾಜಿ ಸಚಿವ ದಿ.ಜೀವರಾಜ್ ಆಳ್ವ ಮಗಳು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾಳೆ. ಅಳ್ವಾ ಮಗ ಆದಿತ್ಯ ಆಳ್ವಾ ವಿರುದ್ಧವೂ ಎಫ್‍ಐಆರ್ ಆಗಿದೆ. ಇದನ್ನೂ ನಾನು ಒಗಟಾಗಿ ಹೇಳಿದ್ದೆ.
2. ಎನ್‍ಸಿಬಿಯಿಂದ ಬಿಬಿಎಂಪಿ ಕಾರ್ಪೋರೇಟರ್ ಕೇಶವಮೂರ್ತಿ ಮಗನಿಗೆ ನೋಟಿಸ್ ನೀಡಿದ್ದಾರೆ. ಅದನ್ನೂ ಕೂಡ ಹೇಳಿದ್ದೆ.
3. ಬಾಲಿವುಡ್‍ಗೂ, ಸ್ಯಾಂಡಲ್‍ವುಡ್‍ಗೂ ಡ್ರಗ್ಸ್ ಸಂಬಂಧ ಇದೆ. ಇದರಲ್ಲಿ ಇಮ್ತಿಯಾಜ್ ಖಾತ್ರಿ ಇದ್ದಾನೆ ಎಂದು ಹೇಳಿದ್ದೆ.
ಹೀಗಾಗಿ ನನ್ನ ಆಪಾದನೆಗಳೆಲ್ಲೂ ಸತ್ಯವಾಗಿದೆ. ಇನ್ನೂ ಎರಡು ವಿಷಯಗಳು ಇವೆ. ಅದು ಮುಂದಿನ ದಿನಗಳಲ್ಲಿ ಸ್ಫೋಟಗೊಳ್ಳತ್ತೆ ಎಂದು ಸಂಬರಗಿ ಮತ್ತೊಂದು ಬಾಂಬ್ ಎಸೆದಿದ್ದಾರೆ. ಅದು ಯಾವಾಗ ಸ್ಫೋಟಗೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.








