ಟೀಮ್ ಇಂಡಿಯಾಗೆ ಆಯ್ಕೆಯಾದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ..!
Prasidh Krishna called up for ODI series against England
ಮುರಳಿ ಕೃಷ್ಣ ಪ್ರಸಿದ್ಧ್ ಕೃಷ್ಣ ಕರ್ನಾಟಕದ ಯುವ ವೇಗಿ. ಈಗ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ತಂಡದ ಸದಸ್ಯ.ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಅನ್ನು ಗುರುತಿಸಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಭವಿಷ್ಯ ನುಡಿದಿದ್ದರು. ಮುಂದೊಂದು ದಿನ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಆಗ್ತಾರೆ ಅಂತ. ಕೊಹ್ಲಿ ಮಾತು ಇದೀಗ ನಿಜವಾಗಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಗೆ ಆಯ್ಕೆಯಾದ ಕರ್ನಾಟಕದ ವೇಗಿ. 25ರ ಹರೆಯದ ಪಿಕೆ ಆಡಿದ್ದು 9 ಪ್ರಥಮ ದರ್ಜೆಯ ಪಂದ್ಯಗಳನ್ನು. ಹಾಗೇ 48 ಲಿಸ್ಟ್ ಎ ಪಂದ್ಯ ಹಾಗೂ 40 ಟಿ-ಟ್ವೆಂಟಿ ಪಂದ್ಯಗಳನ್ನು ಮಾತ್ರ.
2015ರಲ್ಲಿ ತನ್ನ ಮೊದಲ ಪ್ರಥಮ ದರ್ಜೆಯ ಪಂದ್ಯವನ್ನು ಆಡಿದ್ದ ಪ್ರಸಿದ್ಧ್ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದರು. ಮೈಸೂರಿನಲ್ಲಿ ನಡೆದ ಕರ್ನಾಟಕ ಮತ್ತು ಬಾಂಗ್ಲಾದೇಶ ಎ ತಂಡದ ವಿರುದ್ಧ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು.
ಅದೇ ರೀತಿ 2017ರಲ್ಲಿ ಜಾರ್ಖಂಡ್ ವಿರುದ್ಧ ಚೊಚ್ಚಲ ಲಿಸ್ಟ್ ಎ ಪಂದ್ಯವನ್ನು ಆಡಿದ್ದರು. 2018ರಲ್ಲಿ ಪಂಜಾಬ್ ವಿರುದ್ಧ ಮೊದಲ ಟಿ-ಟ್ವೆಂಟಿ ಪಂದ್ಯವನ್ನಾಡಿದ್ರು. ಒಟ್ಟು 148 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ 34 ವಿಕೆಟ್, ಲಿಸ್ಟ್ ಎ ಪಂದ್ಯಗಳಲ್ಲಿ 81 ವಿಕೆಟ್ ಹಾಗೂ ದೇಸಿ ಟಿ-ಟ್ವೆಂಟಿ ಪಂದ್ಯಗಳಲ್ಲಿ 33 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಇನ್ನು 24 ಐಪಿಎಲ್ ಪಂದ್ಯಗಳನ್ನು ಆಡಿರುವ ಪ್ರಸಿದ್ಧ್, 18 ವಿಕೆಟ್ ಕಬಳಿಸಿದ್ದಾರೆ. 30ಕ್ಕೆ ನಾಲ್ಕು ವಿಕೆಟ್ ಪಡೆದುಕೊಂಡಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. ಐಪಿಎಲ್ ನಲ್ಲಿ ಆರ್ ಸಿಬಿ ನೆಟ್ ಬೌಲರ್ ಆಗಿದ್ದ ಪ್ರಸಿದ್ಧ್ ಕೃಷ್ಣ, 2018ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡ್ರು. ಅಲ್ಲದೆ ಮುಂಬೈ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ್ರು. ಸದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೇ ಇದ್ದಾರೆ.
ಇನ್ನು 2018ರ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು. ಆಡಿರುವ ಎಂಟು ಪಂದ್ಯಗಳಲ್ಲಿ 17 ವಿಕೆಟ್ ಗಳನ್ನು ಉರುಳಿಸಿದ್ದರು. ಅದ್ರಲ್ಲೂ ಫೈನಲ್ ನಲ್ಲಿ ಸೌರಾಷ್ಟ್ರದ ವಿರುದ್ಧ 37ಕ್ಕೆ ಮೂರು ವಿಕೆಟ್ ಪಡೆದು ಕರ್ನಾಟಕದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಕರ್ನಾಟಕದ ಬ್ರೇಟ್ ಲೀ ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ್ ಕೃಷ್ಣ ಅವರು ಮಾಜಿ ಆಸ್ಟ್ರೇಲಿಯಾದ ವೇಗಿ ಗ್ಲೇನ್ ಮೆಕ್ ಗ್ರಾಥ್ ಗರಡಿಯಲ್ಲಿ ಪಳಗಿದ ವೇಗಿ. ಚೆನ್ನೈ ಎಮ್ ಆರ್ ಎಫ್ ಫೌಂಡೇಶನ್ ನಲ್ಲಿ ಗ್ಲೇನ್ ಮೆಕ್ ಗ್ರಾಥ್ ಮಾರ್ಗದರ್ಶನವನ್ನು ಪಡೆದುಕೊಂಡಿದ್ದರು.
ಹಾಗೇ ಕೆಪಿಎಲ್ ನಲ್ಲಿ ಬಳ್ಳಾರಿ ಟಸ್ಕರ್ಸ್, ಬೆಂಗಳೂರು ಬ್ಲ್ಯಾಸ್ಟರ್ಸ್, ಮೈಸೂರು ವಾರಿಯರ್ಸ್, ಕರ್ನಾಟಕ, ಇಂಡಿಯಾ ಎ ತಂಡ, ಇಂಡಿಯಾ ಬಿ ತಂಡ, ಇಂಡಿಯಾ ರೆಡ್, ಅಧ್ಯಕ್ಷರ ಇಲೆವೆನ್, 23 ವಯೋಮಿತಿ ಭಾರತ ತಂಡ ಇದೀಗ ಟೀಮ್ ಇಂಡಿಯಾ ಪರ ಆಡಲು ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳುತ್ತಿರುವ ಪ್ರಸಿದ್ಧ್ ಕೃಷ್ಣ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿ. ಆಲ್ ದಿ ಬೆಸ್ಟ್ ಪಿಕೆ.
@prasidhkrishna #bengaluru #ksca #teamindia #bcci #kkr #ipl #vijayhajare #saakshatvsports #saakshatv #cricket #sports