ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಕೊರೊನಾ ದೃಢ
ನವದೆಹಲಿ : ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಭಾರತ ಕ್ರಿಕೆಟ್ ತಂಡದ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಕೊರೊನಾ ಸೋಂಕಿರುವ ದೃಢವಾಗಿದೆ.
ಈ ಮೊದಲು ಕೆಕೆಆರ್ ತಂಡದಲ್ಲಿದ್ದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಹಾಗೂ ಟಿಮ್ ಸೀಫರ್ಟ್ ಅವರಿಗೂ ಕೋವಿಡ್ ಸೋಂಕು ತಗುಲಿತ್ತು.
ಐಪಿಎಲ್ ನ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಮೊಟಕುಗೊಳ್ಳುತ್ತಿದ್ದಂತೆ ಪ್ರಸಿದ್ಧ್ ಕೃಷ್ಣ ಬಯೋ ಬಬಲ್ ನಿಂದ ಬೆಂಗಳೂರಿಗೆ ಆಗಮಿಸಿದ್ದು, ಇಲ್ಲಿ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ಇರುವುದು ಖಚಿತಗೊಂಡಿದೆ.
ಮುಂದಿನ ತಿಂಗಳು ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್‍ಗಾಗಿ ಆರಿಸಿದ ಭಾರತ ತಂಡದಲ್ಲಿ ಮೀಸಲು ಆಟಗಾರರಲ್ಲಿ ಕರ್ನಾಟಕದ ಪ್ರಸಿದ್ಧ ಕೃಷ್ಣ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.










