ಬೆಂಗಳೂರು : ವಂಚನೆ ಆರೋಪದಡಿ ದೂರು ದಾಖಲಾದ ಬೆನ್ನಲ್ಲೆ ಡ್ರೋಣ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಪ್ರತಾಪ್ ವಿರುದ್ಧ ಲಾಕ್ ಡೌನ್ ಸಂದರ್ಭದಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಕೋವಿಡ್ 19 ಸೋಂಕಿತರೊಬ್ಬರ ಸಂಪರ್ಕದಲ್ಲಿದ್ದ ಪ್ರತಾಪ್, ನಿಯಮ ಉಲ್ಲಂಘಿಸಿ ಕ್ವಾರಂಟೈನ್ ನಿಂದ ಹೊರಕ್ಕೆ ಬಂದಿದ್ದಾರೆ ಎಂದು ಡಾ. ಪ್ರಯಾಗ್ ಎಂಬುವರು ಬೆಂಗಳೂರಿನ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್ ವಿರುದ್ಧ ಎಫ್ ಐಆರ್ ಹಾಕಿದ್ದಾರೆ.
ಹೋಂ ಕ್ವಾರಂಟೈನ್ ಗೆ ಒಳಗಾದವರು ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಓಡಾಡುವುದು ಮತ್ತು ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗುವುದು ಇಲ್ಲವೇ ಇನ್ಯಾರಿಗಾದರೂ ಮೊಬೈಲ್ ಕೊಟ್ಟ ಸಂದರ್ಭಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾದರಿ ಮಾರ್ಗಸೂಚಿಗಳ ಅನ್ವಯ ಎಫ್.ಐ.ಆರ್ ದಾಖಲಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆ 271 ಪ್ರಕಾರ, 6 ತಿಂಗಳು ಜೈಲುವಾಸ ಅಥವಾ ದಂಡ ವಿಧಿಸಲಾಗುತ್ತದೆ ಅಥವಾ ಜೈಲು ಹಾಗೂ ದಂಡ ಎರಡನ್ನು ವಿಧಿಸಬಹುದು.








