ಮೈಸೂರು : ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನರನ್ನು ಉದ್ದೇಶಿಸಿ ವಿಡಿಯೋ ಸಂದೇಶವನ್ನು ನೀಡಿದ್ದಾರೆ. ಇದೇ ಭಾನುವಾರ ಅಂದರೆ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ 130 ಕೋಟಿ ಭಾರತೀಯರು ಮನೆಯ ಎಲ್ಲಾ ಲೈಟ್ ಗಳನ್ನು ಆರಿಸಿ, 9 ನಿಮಿಷಗಳ ಕಾಲ ದೀಪ ಅಥವಾ ಮೇಣದ ಬತ್ತಿ ಅಥವಾ ಮೊಬೈಲ್ ಟಾರ್ಚ್ ಆನ್ ಮಾಡುವ ಮೂಲಕ ದೀಪ ಬೆಳಗಿಸಿ ಎಂದು ದೇಶದ ಜನತೆಗೆ ಮೋದಿ ಕರೆ ನೀಡಿದ್ದಾರೆ. ಈ ನಡುವೆ ಪ್ರಧಾನಿ ಮೋದಿಯವರ ಕರೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೈ ಜೋಡಿಸುವ ಹಾಗೂ ಅದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾಳೆ ದೀಪ- ಕ್ಯಾಂಡಲ್ ಗಳನ್ನು ಹಂಚಲು ಮುಂದಾಗಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿಜೀಯವರ ಕರೆಯ ಹಿನ್ನಲೆಯಲ್ಲಿ ನಾಳೆ ಮೈಸೂರು ನಗರ ಅಧ್ಯಕ್ಷ ನೇತೃತ್ವದಲ್ಲಿ ದೀಪ ಮತ್ತು ಕ್ಯಾಂಡಲ್ ಅನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಸಂಸದರ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸಂಸದರ ನಡೆಗೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿ, ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಟ್ವೀಟ್ ಗೆ ವಿರೋಧ ವ್ಯಕ್ತವಾಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ಪ್ರತಾಪ್ ಸಿಂಹ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.








