ಕರಾವಳಿಯ ಗ್ರಾಮೀಣ ಪ್ರದೇಶದಲ್ಲೂ ಸಿಗುತ್ತಿಲ್ಲ ಚಿಕಿತ್ಸೆ – ಚಿಕಿತ್ಸೆಗಾಗಿ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ಸ್ತ್ರೀ ಅಲೆದಾಟ
ನೆಲ್ಯಾಡಿ, ಜುಲೈ 20: ಲಘ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ದಿನಪೂರ್ತಿ ಅಲೆದಾಡಿದರೂ ಚಿಕಿತ್ಸೆಗೆ ಆಸ್ಪತ್ರೆ ಸಿಗದೆ, ಮನೆಗೆ ಹಿಂತಿರುಗಿದ ಘಟನೆಯೊಂದು ನೆಲ್ಯಾಡಿಯಲ್ಲಿ ನಡೆದಿದೆ.
ನೆಲ್ಯಾಡಿಯ ದರ್ಖಾಸು ನಿವಾಸಿ ಆನಂದ ಎಂಬುವವರ 9 ತಿಂಗಳ ತುಂಬು ಗರ್ಭಿಣಿ ಪತ್ನಿ ಗೀತಾ ಅವರಿಗೆ ಲಘು ಜ್ವರ ಕಾಣಿಸಿಕೊಂಡಿದ್ದು, ಅವರು ಅವರ ಅಕ್ಕನ ಜೊತೆಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋಗಿದ್ದರು. ಆದರೆ ಅಲ್ಲಿ ವೈದ್ಯರಿರದ ಹಿನ್ನಲೆಯಲ್ಲಿ ಅವರು ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅವರನ್ನು ತಪಾಸಣೆ ಮಾಡಿದ ವೈದ್ಯರು, ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ 108 ಅ್ಯಂಬುಲೆನ್ಸ್ ನಲ್ಲಿ ಕಳುಹಿಸಿ ಕೊಟ್ಟಿದ್ದಾರೆ.
ಪುತ್ತೂರು ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ 8 ನೇ ತಿಂಗಳ ಸ್ಕ್ಯಾನಿಂಗ್ ಆಗದೇ ಇರುವ ಕಾರಣ ನೀಡಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದು, 108 ಅ್ಯಂಬುಲೆನ್ಸ್ ನಲ್ಲಿಯೇ ಅವರು ಲೇಡಿಗೋಶನ್ ಆಸ್ಪತ್ರೆಗೆ ತೆರಳಿದರು. ಆದರೆ ಮಹಿಳೆ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಲೇಡಿಗೋಶನ್ ಆಸ್ಪತ್ರೆಯೊಳಗೆ ಪ್ರವೇಶ ನಿರಾಕರಿಸಿದ್ದು, ವೆನ್ಲಾಕ್ ಗೆ ಹೋಗುವಂತೆ ಸೂಚಿಸಿದ್ದಾರೆ. ವೆನ್ಲಾಕ್ ನಲ್ಲಿ ಅವರನ್ನು ದಾಖಲಿಸಿಕೊಳ್ಳದೆ ವಾಪಸ್ ಲೇಡಿಗೋಶನ್ ಗೆ ಹೋಗುವಂತೆ ಸೂಚಿಸಿದ್ದಾರೆ. ಹೀಗೆ ಅ್ಯಂಬುಲೆನ್ಸ್ ನಲ್ಲಿ ನಾಲ್ಕು ಬಾರಿ ವೆನ್ಲಾಕ್ ಮತ್ತು ಲೇಡಿಗೋಶನ್ ನಡುವೆ ಗರ್ಭಿಣಿ ಮಹಿಳೆ ಅಲೆದಾಟ ನಡೆಸಿದ್ದು, ಕೊನೆಗೆ ಅ್ಯಂಬುಲೆನ್ಸ್ ನವರು ಗರ್ಭಿಣಿ ಮಹಿಳೆ ಮತ್ತು ಆಕೆಯ ಜೊತೆಗಿದ್ದ ಅವರ ಅಕ್ಕನನ್ನು ವೆನ್ಲಾಕ್ ನಲ್ಲಿಯೇ ಬಿಟ್ಟು ವಾಪಸಾಗಿದೆ.
ಗರ್ಭಿಣಿ ಮಹಿಳೆ ವೆನ್ಲಾಕ್ ಆಸ್ಪತ್ರೆಯ ಜಗಲಿಯಲ್ಲಿ ಊಟ ನೀರು ಇಲ್ಲದೆ ತಡರಾತ್ರಿಯ ವರೆಗೆ ಸಮಯ ಕಳೆದಿದ್ದು, ಬಳಿಕ ಅವರ ಮನೆಯವರು ನೆಲ್ಯಾಡಿಯಿಂದ ಜೀಪು ಮಾಡಿಕೊಂಡು ಮಂಗಳೂರಿಗೆ ಹೋಗಿ ಅವರನ್ನು ಮನೆಗೆ ಕರೆತಂದಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆಯಿಂದ ಸರ್ಕಾರಿ ಆಸ್ಪತ್ರೆಗಳು ಚಿಕಿತ್ಸೆ ನೀಡದೆ ಸತಾಯಿಸಿದ್ದಾರೆ ಎಂದು ಮಹಿಳೆಯ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶಾಸಕ ಎಸ್. ಅಂಗಾರರವರಿಗೆ ಮಾಹಿತಿ ನೀಡಲು ರಾತ್ರಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಿಲ್ಲ ಎಂದು ಹೇಳಲಾಗಿದೆ.