ಚಿಕಿತ್ಸೆ ಸಿಗದೆ ಭಾರತೀಯ ಗರ್ಭಿಣಿ ಮಹಿಳೆ ಸಾವು – ಪೋರ್ಚುಗಲ್ ಆರೋಗ್ಯ ಸಚಿವೆ ರಾಜಿನಾಮೆ..
ಪ್ರವಾಸಿ ಭಾರತೀಯ ಗರ್ಭಿಣಿ ಮಹಿಳೆಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಕಾರಣಕ್ಕೆ ಹೊಣೆಹೊತ್ತು ಪೂರ್ಚುಗಲ್ ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
34 ವರ್ಷದ ಪ್ರವಾಸಿ ಭಾರತೀಯ ಮಹಿಳೆಯೊಬ್ಬರು ಹಾಸಿಗೆ ಲಭ್ಯವಿಲ್ಲದ ಕಾರಣ ಲಿಸ್ಬನ್ ನ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸುವಾಗ ಹೃದಯಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೋರ್ಚುಗಲ್ ನಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಎಮರ್ಜೆನ್ಸಿ ಸೇವೆಗಳ ಮುಚ್ಚುವಿಕೆ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಆರೋಗ್ಯ ಸೇವೆಯ ಅಸಮರ್ಥತೆಯ ಕಾರಣದಿಂದಾಗಿ ಇದೇ ರೀತಿ ಹಲವು ಪ್ರಕರಣಗಳು ವರದಿಯಾಗಿವೆ. ಗರ್ಭಿಣಿಯರ ಪ್ರಕರಣಗಳಲ್ಲಿ ತೀವ್ರ ಟೀಕೆಗಳನ್ನ ಎದುರಿಸಿದ ನಂತರ ಟೆಮಿಡೋ ರಾಜೀನಾಮೆ ನೀಡಿದ್ದಾರೆ.
ಪೋರ್ಚುಗಲ್‌ನ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಅವರು ಟ್ವಿಟ್ಟರ್‌ನಲ್ಲಿ ಟೆಮಿಡೊ ಅವರ ಸೇವೆಗಳಿಗೆ ಧನ್ಯವಾದ ತಿಳಿಸಿದ್ದಾರೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ರೋಗವನ್ನ ಎದುರಿಸಲು ಮಾಡಿದ ಸೇವೆಗೆ “ಕೃತಜ್ಞರಾಗಿರಬೇಕು” ಎಂದು ಟ್ವೀಟ್ ಮಾಡಿದ್ದಾರೆ.
ಪೋರ್ಚುಗಲ್ ನಲ್ಲಿ ಹೆರಿಗೆ ಮತ್ತು ಪ್ರಸೂತಿ ತಜ್ಞರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ ಕಾರಣಕ್ಕೆ ಸರ್ಕಾರ ಭಾರಿ ಟೀಕೆಗಳನ್ನ ಎದುರಿಸುತ್ತಿದೆ.