ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೈಸೂರು ದಸರಾ ಉದ್ಘಾಟನೆ. – ಸಿ ಎಂ ಬೊಮ್ಮಾಯಿ
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತೆಗಳು ಬರದಿಂದ ಸಾಗುತ್ತಿವೆ. ಕಳೆದ ಎರಡು ವರ್ಷ ಕೋವಿಡ್ ಕಾರಣಗಳಿಂದ ಕಳೆಗುಂದಿದ್ದ ದಸರಾ ಉತ್ಸವವನ್ನ ಭಾರಿ ಅದ್ದೂರಿಯಾಗಿ ಆಚರಿಸಲು ರಾಜ್ ಸರ್ಕಾರ ನಿರ್ಧರಿಸಿದೆ.
ಈ ಬಾರಿ ದಸರಾ ಉದ್ಘಾಟನೆ ನೂತನವಾಗಿ ಆಯ್ಕೆಯಾದ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಸಭೆ ನಡೆಸಿ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಗಿತ್ತು. ನಮ್ಮ ಪತ್ರಕ್ಕೆ ಸಮ್ಮತಿಸಿ ಇಂದು ಪತ್ರ ಬಂದಿದೆ. ಹೀಗಾಗಿ ಈ ಬಾರಿ ರಾಷ್ಟ್ರದ ಪ್ರಥಮ ಪ್ರಜೆ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರು ದಸರಾ ಸೆಪ್ಟೆಂಬರ್ 26 ರಿಂದ ಆರಂಭಗೊಳ್ಳಲಿದ್ದು, ಅಕ್ಟೋಬರ್ 5 ವರೆಗೆ ನಡೆಯಲಿದೆ. ಸೆಪ್ಟೆಂಬರ್ 26ರಂದು ಬೆಳಿಗ್ಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಪೂಜೆ ನೆರವೇರಲಿದೆ. ಅನಂತರ ದಸರಾಗೆ ಅಧಿಕೃತ ಚಾಲನೆ ದೊರೆಯಲಿದೆ.
ದಸರಾ ಪ್ರಯುಕ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ನಾಯಕರನ್ನೊಳಗೊಂಡ ಸಮಿತಿ ಹಲವು ಸುತ್ತಿನ ಸಭೆ ನಡೆಸಿದೆ. ಕೊರೋನಾ ಕಾರಣ ಕಳೆದ ವರ್ಷ ಸರಳ ದಸರಾ ಆಚರಿಸಲಾಗಿತ್ತು.








