ಬೆಂಗಳೂರು: ಕೊರೊನಾ ವೈರಸ್ ಗೆ ಇಡೀ ವಿಶ್ವವೇ ತಲೆಬಾಗಿದೆ. ಈ ವೈರಸ್ ಹರಡುವುದನ್ನು ತಡೆಗಟ್ಟುವುದು ಹೇಗೆ..? ಅದರ ಪರಿಣಾಮಗಳನ್ನು ಎದುರಿಸುವುದು ಹೇಗೆ..? ಎಂಬ ಪ್ರಶ್ನೆಗಳು ಈಗಾಗಲೇ ಎಲ್ಲರ ತಲೆಯಲ್ಲೂ ಗಿರಕಿ ಹೊಡೆಯುತ್ತಿವೆ. ಈ ಮಧ್ಯೆ ಕೊರೊನಾ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಂತ ಪ್ರಚಾರಕ್ಕೆ ಮುಂದಾದ್ರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಪ್ರಧಾನಮಂತ್ರಿ ಸುರಕ್ಷಾ ನಿಧಿಯ ಬಗ್ಗೆ ಪ್ರಶ್ನೆಗಳು ಹಾಗೂ ಟೀಕೆಗಳು ಕೂಡ ಆರಂಭವಾಗಿದೆ.
ಟೀಕೆ ಯಾಕೆ..?
ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಎದುರಿಸುವಾಗ ರಾಷ್ಟ್ರೀಯ ವಿಪತ್ತು ನಿಧಿಯನ್ನು ಬಳಸಿಕೊಳ್ಳುತ್ತದೆ. ಆಗ ದೇಶದ ಪ್ರಧಾನಿಗಳು ಜನರಿಗೆ ರಾಷ್ಟ್ರೀಯ ವಿಪತ್ತು ನಿಧಿಗೆ ಹಣವನ್ನು ದಾನವಾಗಿ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಪ್ರಧಾನಮಂತ್ರಿ ಸುರಕ್ಷಾ ನಿಧಿ(ಪಿಎಂ ಕೇರ್ಸ್) ಎನ್ನುವ ವಿಶೇಷ ಅಕೌಂಟನ್ನ ಸ್ಥಾಪಿಸಿದ್ದಾರೆ. ಇದೀಗ ಇದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ರಾಷ್ಟ್ರೀಯ ವಿಪತ್ತು ನಿಧಿ ಇರುವಾಗ ಪ್ರಧಾನಮಂತ್ರಿ ಸುರಕ್ಷಾ ನಿಧಿ ಬೇಕಿತ್ತಾ? ಕೊರೊನಾ ವಿಚಾರವನ್ನು ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆಗಳೆದ್ದಿವೆ.
ಕೊರೊನಾ ವಿರುದ್ಧ ಹೋರಾಡಲು ಜನರು ಕೈಲಾದಷ್ಟು ದಾನವನ್ನು ನೀಡಲಿ ಎನ್ನುವ ಕಾರಣಕ್ಕೆ ಪ್ರಧಾನಮಂತ್ರಿ ಸುರಕ್ಷಾ ನಿಧಿ ಖಾತೆ ತೆರೆಯಲಾಗಿದೆ. ಆದರೆ, ಇದರಲ್ಲಿ ಪ್ರಧಾನಿಯವರ ಸ್ವಗತವೇ ಹೆಚ್ಚಾಗಿ ಕಾಣುತ್ತಿದೆ ಎಂದು ಆರೋಪಿಸುತ್ತಿದೆ ವಿಪಕ್ಷಗಳು.
ಈ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದ್ದು, ಪಿಎಂ ಕೇರ್ಸ್ ಎಂದು ಕರೆಯಲು ಸರಿಯಾಗುವುದಿಲ್ಲ. ಇದರ ಬದಲು ರಾಷ್ಟ್ರೀಯ ಸುರಕ್ಷಾ ನಿಧಿ ಎಂದು ಕರೆಯುವುದು ಸೂಕ್ತ ಎಂದಿದ್ದಾರೆ. ಅಲ್ಲದೆ ದೇಶದ ಹಿತದೃಷ್ಟಿಯಿಂದ ಎಲ್ಲರೂ ಸಾಧ್ಯವಾದಷ್ಟು ನೆರವಿಗೆ ನಿಲ್ಲೋಣ ಎಂದು ಕರೆಕೊಟ್ಟಿದ್ದಾರೆ.
ಸ್ವಹಿತಾಸಕ್ತಿಯ ಬೆಳೆ ತೆಗೆಯಬೇಕೆ?
ಇನ್ನೊಂದಡೆ ಪತ್ರಕರ್ತ ರಾಮಚಂದ್ರ ಗುಹಾರವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅದರಲ್ಲಿ ಸ್ವಪ್ರತಿಷ್ಟೆಯನ್ನು ಪ್ರೇರೇಪಿಸುವ ಪಿಎಂ ಕೇರ್ಸ್ ಎನ್ನುವ ಹೆಸರು ಯಾಕೆ. ರಾಷ್ಟ್ರೀಯ ವಿಪತ್ತಿನಲ್ಲಿಯು, ಸ್ವಹಿತಾಸಕ್ತಿಯ ಬೆಳೆಯನ್ನು ತೆಗೆಯಬೇಕೆ ಎಂದು ಪ್ರಶ್ನಿಸಿದ್ದಾರೆ.








