ಇಂದು ಲಡಾಖ್‌ನ ಲೇಹ್ ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ ಮೋದಿ
ಲೇಹ್, ಜುಲೈ 3: ಇಂದು ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನ ಲೇಹ್ ಗೆ ದಿಢೀರ್ ಭೇಟಿ ನೀಡಿದ್ದು, ಸೇನಾ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದರು.
ಚೀನಾ ಜೊತೆ ಜೂನ್ 15 ರ ಘರ್ಷಣೆಯ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಲಡಾಖ್ ನ ಲೇಹ್‌ಗೆ ಆಗಮಿಸಿದರು. ಅಂದು ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಸೈನ್ಯದ ಮನೋಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದು ಸೈನಿಕರೊಂದಿಗೆ ಪ್ರಧಾನಮಂತ್ರಿ ಸಂವಹನ ನಡೆಸಿದ್ದು ಜೊತೆಗೆ ಚೀನಾಕ್ಕೆ ಬಲವಾದ ಸಂದೇಶ ರವಾನಿಸಿದರು.

ಝಾಂಸ್ಕಾರ್ ಪರ್ವತ ಶ್ರೇಣಿಯ ಸೌಂದರ್ಯವನ್ನೂ ಆಸ್ವಾದಿಸುತ್ತಾ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತಿದ್ದ ಸೈನಿಕರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನಾರವಾನೆ ಮಾತುಕತೆಯಲ್ಲಿ ಭಾಗಿಯಾದರು.
ಪ್ರಧಾನಿ ಕಚೇರಿಯ ಪ್ರಕಾರ, ಅವರು ಲಡಾಖ್ ನ ನಿಮುನಲ್ಲಿ ಮುಂಚೂಣಿ ನೆಲೆಯಲ್ಲಿದ್ದು ಇಂದು ಮುಂಜಾನೆ ಅಲ್ಲಿಗೆ ತಲುಪಿದರು ಮತ್ತು ಬಳಿಕ ಹಿಂದಿರುಗಲಿದ್ದಾರೆ. 11,000 ಅಡಿ ಎತ್ತರದಲ್ಲಿರುವ ಈ ಪ್ರದೇಶವು ವಿಶ್ವದ ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿ ಒಂದಾಗಿದೆ, ಇದು ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದೆ ಮತ್ತು ಸಿಂಧೂ ನದಿಯ ದಡದಲ್ಲಿದೆ.
ಸೇನೆ, ವಾಯುಪಡೆ ಮತ್ತು ಐಟಿಬಿಪಿಯ ಸಿಬ್ಬಂದಿಗಳು ಪ್ರಧಾನಮಂತ್ರಿ ಸಂವಹನದಲ್ಲಿ ಉಪಸ್ಥಿತರಿದ್ದರು. ಲಡಾಖ್ ಕುರಿತು ಭಾರತ ಚೀನಾಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಪ್ರಧಾನಿ ಮೋದಿ ಕಳೆದ ವಾರ ತಮ್ಮ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ.








