ಪ್ರಧಾನಿ ಮೋದಿ ದೇಶ ಕಂಡ ಮೊದಲ ಅಹಿಂದ ಪ್ರಧಾನಿ – ಎಚ್. ವಿಶ್ವನಾಥ್
ಮೈಸೂರು, ಜುಲೈ 5: ಮಾಜಿ ಸಚಿವ ಎಚ್.ವಿಶ್ವನಾಥ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ದೇಶ ಕಂಡ ಮೊದಲ ಅಹಿಂದ ಪ್ರಧಾನಿ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಲಡಾಖ್ ಭೇಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್ ಅಹಿಂದ ಎಂದುಕೊಳ್ಳುವ ಸಿದ್ದರಾಮಯ್ಯ ಮೊದಲು ನರೇಂದ್ರ ಮೋದಿ ಅವರು ಈ ದೇಶ ಕಂಡ ಮೊದಲ ಅಹಿಂದ ಪ್ರಧಾನಿ ಎಂಬುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೇ ಮೋದಿಗೂ, ದೇವರಾಜ ಅರಸು ಅವರಿಗೂ ಸಾಕಷ್ಟು ಸಾಮ್ಯತೆಯಿದೆ ಎಂದು ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ನಾನು ಪ್ರಧಾನಿ ಮೋದಿ ಅವರಲ್ಲಿ ದೇವರಾಜ ಅರಸು ಅವರನ್ನು ಕಾಣುತ್ತಿದ್ದೇನೆ. ಮೋದಿಯವರನ್ನು ಟೀಕಿಸುವ ಮೊದಲು ಯೋಚಿಸಿ ಮಾತನಾಡಿ ಎಂದು ಕಾಂಗ್ರೆಸ್ ನಾಯಕರನ್ನು ಅವರು ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಟೀಕಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪತ್ರ ಬರೆದು, ಮೊದಲು ಸರಿಯಾಗಿ ಮಾತನಾಡುವುದನ್ನು ಕಲಿ ಎಂದು ಬುದ್ಧಿ ಹೇಳಿದ್ದಾರೆ. ದೇಶದ ಸಮಗ್ರತೆಯ ವಿಚಾರ ಬಂದಾಗ ಸರಿಯಾಗಿ ಮಾತನಾಡಬೇಕು. ನಿಮ್ಮ ಪಕ್ಷದ ಪ್ರಧಾನಿಗಳಿಗೆ ನೀವು ಸರಿಯಾದ ಗೌರವ ಕೊಟ್ಟಿಲ್ಲ. ನೀವು ಮನಮೋಹನ್ ಸಿಂಗ್, ನರಸಿಂಹರಾವ್ ಅವರನ್ನು ಹೇಗೆ ನಡೆಸಿಕೊಂಡಿದ್ದೀರಿ ಎಂಬುವುದು ಎಲ್ಲರಿಗೂ ತಿಳಿದಿದೆ ಎಂದು ಎಚ್.ವಿಶ್ವನಾಥ್, ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದರು.

ಕೊರೊನಾ ನಿರ್ವಹಣೆಯಲ್ಲಿ ಹಣ ದುರ್ಬಳಕೆ ಎಂಬ ಪ್ರತಿಪಕ್ಷ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರೇ ನಿಮ್ಮಲ್ಲಿ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಕೇವಲ ಹಿಟ್ ಅಂಡ್ ರನ್ ನಂತೆ ಅಪಾದನೆ ಮಾಡಬೇಡಿ. ಕಾಂಗ್ರೆಸ್ ನಾಯಕರೇ ಅಪ್ರಬುದ್ಧರಂತೆ ಮಾತನಾಡಬೇಡಿ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಎಚ್. ವಿಶ್ವನಾಥ್, ಸಿದ್ದರಾಮಯ್ಯರನ್ನು ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿದ್ದಾಗ ಅವರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದೇ ನಾನು. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದಕ್ಕೆ ಪಶ್ಚಾತ್ತಾಪ ಆಗಿಲ್ಲ, ಸಂತೋಷವಿದೆ. ಆದರೆ, ಸಿದ್ದರಾಮಯ್ಯ ಮಾತ್ರ ಎಲ್ಲರನ್ನೂ ತುಳಿಯುವ ಕೆಲಸ ಮಾಡಿದರು. ಎಲ್ಲರನ್ನೂ ತುಳಿಯುವುದೇ ಅವರ ಕೆಲಸ ಎಂದು ಟೀಕಾ ಪ್ರಹಾರ ನಡೆಸಿದರು.








