ಬೆಂಗಳೂರು : ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಹುಟ್ಟುಹಬ್ಬ. 87ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ನಮ್ಮ ಮಾಜಿ ಪ್ರಧಾನಿ ದೇವೇಗೌಡ ಜೀಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ದೀರ್ಘಾಯುಷ್ಯ ಹಾಗೂ ಒಳ್ಳೆ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ತಂದೆಗೆ ಶುಭಾಶಯ ತಿಳಿಸಿದ ಹೆಚ್ ಡಿ ಕುಮಾರಸ್ವಾಮಿ
ದೇಶದ ಅತ್ಯುನ್ನತ, ಅಸಾಮಾನ್ಯ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ. ಈ ಮಾತನ್ನು, ಹಳ್ಳಿಯ ಮಣ್ಣಿಂದ ಬಂದು, ರಾಷ್ಟ್ರೀಯ ಪಕ್ಷದ ಹಿನ್ನೆಲೆ ಇಲ್ಲದೇ ಸಾಧಿಸಿ ತೋರಿಸಿದವರು ಹೆಚ್.ಡಿ ದೇವೇಗೌಡರು. ಬದ್ಧತೆ, ಛಲ, ಪರಿಶ್ರಮ, ಹೋರಾಟ ಮತ್ತು ನಾಡಿಗೆ ಹೆಗ್ಗುರುತಾಗಿರುವ ಅವರ ಜನ್ಮದಿನಕ್ಕೆ ಶುಭಾಶಯಗಳು ಎಂದು ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಇನ್ನು 87ನೇ ವಸಂತಕ್ಕೆ ಕಾಲಿಡುತ್ತಿರುವ ದೇವೇಗೌಡರು, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಮನೆಯ ಬಳಿಗೆ ಯಾರೂ ಬರಬೇಡಿ ಎಂದು ಈಗಾಗಲೇ ಹೇಳಿದ್ದಾರೆ. ಕೊರೊನಾ ಸೋಂಕಿನ ಆತಂಕ ಇರುವುದರಿಂದ, ನೀವುಗಳು ಇದ್ದಲ್ಲಿಯೇ ಹಾರೈಸಿ ಸಾಕು ಎಂದು ಅಭಿಮಾನಿಗಳಿಗೆ ದೇವೇಗೌಡರು ತಿಳಿಸಿದ್ದಾರೆ.