ವಿಶ್ವ ನಾಯಕರ ಪೈಕಿ ಸರ್ವ ಶ್ರೇಷ್ಠ ಸ್ಥಾನದಲ್ಲಿ ನಮೋ : ಮೋದಿ…ನಂಬರ್. 1
ನವದೆಹಲಿ: ವಿಶ್ವದ 13 ಬಲಿಷ್ಠ ರಾಷ್ಟ್ರಗಳ ವಿಶ್ವನಾಯಕರ ಪೈಕಿ ಭಾರತದ ಪ್ರಧಾನ ಮಂತ್ರಿ ಮೋದಿ ಅವರು ನಂಬರ್ 1 ಸ್ಥಾನ ಪಡೆದಿದ್ದಾರೆ.. ಹೌದು… 13 ದೇಶಗಳ ನಾಯಕರ ಪೈಕಿ ಶೇ.66 ಅಂಕಗಳೊಂದಿಗೆ ನಂ 1 ಸ್ಥಾನ ಪಡೆದಿರುವ ನಮೋ ವಿಶ್ವದ ದೊಡ್ಡಣ್ಣ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಹಲವು ಬಲಿಷ್ಠ ದೇಶಗಳ ನಾಯಕರನ್ನು ಹಿಂದಿಕ್ಕಿದ್ದಾರೆ.
ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ಈ ರೇಟಿಂಗ್ನ್ನು ಮೋದಿಗೆ ನೀಡಿದೆ. ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಅಗ್ರಗಣ್ಯ ನಾಯಕರ ಬಗ್ಗೆ ರೇಟಿಂಗ್ ಕಲೆಹಾಕುತ್ತದೆ. ಈ ಪೈಕಿ ಮೋದಿ ಅವರಿಗೆ ಶೇ.66 ರೇಟಿಂಗ್ ಪಡೆದುಕೊಂಡು ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಭಾರತದಲ್ಲಿ ಕೊರೊನಾ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಲು ತೆಗೆದುಕೊಂಡ ನಿರ್ಧಾರ ಮತ್ತು ದೇಶವನ್ನು ಮುನ್ನಡೆಸುತ್ತಿರುವ ರೀತಿಗೆ ಈ ರೇಟಿಂಗ್ ಬಂದಿದೆ ಎಂದು ವರದಿಯಾಗಿದೆ. ಈ ನಡುವೆ ಶೇ.28 ರೇಟಿಂಗ್ ಮೋದಿಯವರ ವಿರುದ್ಧ ಬಂದಿದೆ. 
ಮೋದಿ ಬಳಿಕ ಅಧಿಕ ರೇಟಿಂಗ್ ಪಡೆದವರ ಪೈಕಿ ಶೇ. 65 ರೇಟಿಂಗ್ ನೊಂದಿಗೆ ಇಟಲಿಯ ಪ್ರಧಾನಿ ಮಾರಿಯೋ ದಾರ್ಗಿ 2ನೇ ಸ್ಥಾನದಲ್ಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ 63 ರೇಟಿಂಗ್ ಪಡೆದು 3ನೇ ಸ್ತಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಶೇ 54 ರೇಟಿಂಗ್ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶೇ.53 ರೇಟಿಂಗ್ ಪಡೆದು 5ನೇ ಸ್ಥಾನದಲ್ಲಿದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಶೇ. 53 ರೇಟಿಂಗ್ ಪಡೆದು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.








