ಉಡುಪಿ: ಕರಾವಳಿಯ ಧಾರ್ಮಿಕ ಕೇಂದ್ರವಾದ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಾಕ್ಷಿಯಾಗಲಿದ್ದಾರೆ. ನವೆಂಬರ್ 28ರಂದು ನಡೆಯಲಿರುವ ಐತಿಹಾಸಿಕ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸುವುದು ಇದೀಗ ಖಚಿತಗೊಂಡಿದ್ದು, ಪ್ರಧಾನ ಮಂತ್ರಿಯವರ ಕಾರ್ಯಾಲಯ (PMO) ಈ ಕುರಿತು ಅಧಿಕೃತ ಆದೇಶ ಮತ್ತು ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಈ ಮಹತ್ವದ ಭೇಟಿಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತುರ್ತು ಪತ್ರವನ್ನು ರವಾನಿಸಿದೆ. ಪ್ರಧಾನಿಯವರ ಆಗಮನಕ್ಕಾಗಿ ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಕಾರ್ಯಕ್ರಮಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಕೂಡಲೇ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ, ಕಾರ್ಯಕ್ರಮದ ಆಯೋಜಕರಿಗೆ ಭದ್ರತಾ ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷ ರಕ್ಷಣಾ ದಳದ (SPG) ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸುವಂತೆ ನಿರ್ದೇಶನ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಪ್ರವಾಸದ ನಿಮಿಷದ ವಿವರ (Minute-to-Minute) ಈ ಕೆಳಗಿನಂತಿದೆ:
ನವದೆಹಲಿಯಿಂದ ಕರಾವಳಿಗೆ ಪ್ರಯಾಣ
ನವೆಂಬರ್ 28ರಂದು ಬೆಳಗ್ಗೆ 8:15ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ಪ್ರಧಾನಿಯವರು ಪ್ರಯಾಣ ಆರಂಭಿಸಲಿದ್ದಾರೆ. ಬೆಳಗ್ಗೆ 11:05ಕ್ಕೆ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಹೆಲಿಕಾಪ್ಟರ್ ಮೂಲಕ ಉಡುಪಿಗೆ ಎಂಟ್ರಿ
ಮಂಗಳೂರು ವಿಮಾನ ನಿಲ್ದಾಣದಿಂದ 11:10ಕ್ಕೆ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮುಂದುವರಿಸಲಿರುವ ಮೋದಿ ಅವರು, ಸರಿಯಾಗಿ 11:35ಕ್ಕೆ ಆದಿ ಉಡುಪಿಯಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ.
ಶ್ರೀಕೃಷ್ಣನ ದರ್ಶನ ಮತ್ತು ಗೀತೋತ್ಸವ
ಮಧ್ಯಾಹ್ನ 12 ಗಂಟೆಗೆ ನೇರವಾಗಿ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿರುವ ಪ್ರಧಾನಿಯವರು, ಮೊದಲು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆಯಲಿದ್ದಾರೆ. ತದನಂತರ ಮಠದ ಆವರಣದಲ್ಲಿ ಆಯೋಜಿಸಲಾದ ಬೃಹತ್ ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ವೇದಿಕೆಯಲ್ಲಿ ನೆರೆದ ಸಭಿಕರನ್ನುದ್ದೇಶಿಸಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ.
ಉಡುಪಿಯಿಂದ ಗೋವಾದತ್ತ ಪ್ರಯಾಣ
ಸುಮಾರು ಒಂದೂವರೆ ಗಂಟೆಗಳ ಕಾಲ ಉಡುಪಿಯಲ್ಲಿ ಕಳೆಯಲಿರುವ ಪ್ರಧಾನಿಯವರು, ಮಧ್ಯಾಹ್ನ 1:30ಕ್ಕೆ ಮಠದಿಂದ ನಿರ್ಗಮಿಸಲಿದ್ದಾರೆ. 1:45ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 2:15ಕ್ಕೆ ವಿಶೇಷ ವಿಮಾನದ ಮೂಲಕ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಗೋವಾದಲ್ಲಿ ಗೋಕರ್ಣ ಪರ್ತಗಾಳಿ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.
ಪ್ರಧಾನಿ ಮೋದಿಯವರ ಆಗಮನದ ಸುದ್ದಿಯು ಉಡುಪಿಯ ಜನತೆಯಲ್ಲಿ ಮತ್ತು ಕೃಷ್ಣ ಭಕ್ತರಲ್ಲಿ ತೀವ್ರ ಸಂಚಲನ ಮತ್ತು ಉತ್ಸಾಹವನ್ನು ಮೂಡಿಸಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಜಿಲ್ಲಾಡಳಿತ ಮತ್ತು ಮಠದ ಆಡಳಿತ ಮಂಡಳಿ ಭರದ ಸಿದ್ಧತೆಗಳನ್ನು ಆರಂಭಿಸಿದೆ.








