ಸರಿಲೇರು ನೀಕೆವ್ವರು ಸಿನಿಮಾದ ಸಕ್ಸಸ್ ಬಳಿಕ ಮಹೇಶ್ ಬಾಬು ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಟಾಲಿವುಡ್ ಪ್ರಿನ್ಸ್ ಗೀತಾ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡುತ್ತಿರುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಈ ಇಬ್ಬರ ಕಾಂಬಿನೇಶನ್ ಸಿನಿಮಾದ ಕಥೆ ಲೀಕ್ ಆಗಿದ್ದು, ಇದೀಗ ಚಿತ್ರದ ಟೈಟಲ್ ಕೂಡ ಲೀಕ್ ಆಗಿದೆ. ಇದು ಚಿತ್ರತಂಡದ ತಲೆಬಿಸಿಗೆ ಕಾರಣವಾಗಿದ್ದು, ಸೂಪರ್ ಸ್ಟಾರ್ ಮಹೇಶ್ ಬಾಬು ಫುಲ್ ಗರಂ ಆಗಿದ್ದಾರೆ.
ಚಿತ್ರಕ್ಕೆ ‘ಸರ್ಕಾರ್ ವಾರಿ ಪಾಟ’ ಎಂದು ಟೈಟಲ್
ಮಹೇಶ್ ಬಾಬು ಮತ್ತು ಪರಶುರಾಮ್ ಕಾಂಬಿನೇಶನ್ ನ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ‘ಸರ್ಕಾರ್ ವಾರಿ ಪಾಟ’ ಎಂದು ಟೈಟಲ್ ಇಡಲಾಗಿದೆಯಂತೆ. ಅಂದ್ಹಾಗೆ ಚಿತ್ರತಂಡ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟೈಟಲ್ ರಿವೀಲ್ ಮಾಡಲು ಪ್ಲಾನ್ ಮಾಡಿಕೊಂಡಿತ್ತು. ಆದ್ರೆ ಈಗ ಆಗಲೇ ಚಿತ್ರದ ಟೈಟಲ್ ಬಹಿರಂಗವಾಗಿರುವುದು ಚಿತ್ರತಂಡಕ್ಕೆ ಬೇಸರ ತರಿಸಿದೆ.
ಹೀಗಾಗಿ ಚಿತ್ರತಂಡದ ಅಜಾಗರುಕತೆಯೇ ಟೈಟಲ್ ಲೀಕ್ ಆಗಲು ಕಾರಣ ಎಂದು ಮಹೇಶ್ ಬಾಬು ಫುಲ್ ಗರಂ ಆಗಿದ್ದಾರಂತೆ. ಅಲ್ಲದೆ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.
ಇನ್ನು ಈ ಸಿನಿಮಾದಲ್ಲಿ ಪ್ರಿನ್ಸ್ ಗೆ ಜೋಡಿಯಾಗಿ ಬಾಲಿವುಡ್ ಸುಂದರಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಈ ಹಿಂದೆ ಶ್ರದ್ಧಾ ಕಪೂರ್ ಸಾಹೋ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಮಿಂಚಿದ್ದರು.








