Uttarapradesha: ಬುದ್ದಿ ಹೇಳಿದ್ದಕ್ಕೆ ಶಿಕ್ಷನ ಮೇಲೆ ಗುಂಡಿಟ್ಟ ವಿದ್ಯಾರ್ಥಿ..
ಬುದ್ದಿವಾದ ಹೇಳಿದ್ದಕ್ಕೆ ಶಾಲಾ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ಮಾಡಿರುವ ಘಟನೆ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಜಹಾಂಗೀರಾಬಾದ್ ಪಟ್ಟಣದ ಆದರ್ಶ್ ರಾಮ್ ಸ್ವರೂಪ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, 12ನೇ ತರಗತಿಯ ಬಾಲಕ ರೇವಾನ್ ಗ್ರಾಮದ ನಿವಾಸಿ ಗುರ್ವಿಂದರ್ ಸಿಂಗ್ ಮತ್ತೊಬ್ಬ ವಿದ್ಯಾರ್ಥಿ ರೋಹಿತ್ ಮೌರ್ಯ ಎಂಬಾತನೊಂದಿಗೆ ಜಗಳವಾಡಿದ್ದ. ಬಳಿಕ ಪ್ರಾಂಶುಪಾಲ ರಾಮ್ ಸಿಂಗ್ ವರ್ಮಾ ಅವರು ಆತನನ್ನ ಕರೆದು ಬೈದು ಬುದ್ದಿವಾದ ಹೇಳಿದ್ದರು. ಇದರಿಂದ ಕುಪಿತಗೊಂಡಿದ್ದ ಎನ್ನಲಾಗಿದೆ. ಆರೋಪಿ ವಿದ್ಯಾರ್ಥಿ ಪ್ರಾಂಶುಪಾಲರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಬಂದೂಕಿನೊಂದಿಗೆ ಪರಾರಿಯಾಗಿದ್ದಾನೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಲಕ್ನೋಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕರಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪರಾರಿಯಾಗಿರುವ ವಿದ್ಯಾರ್ಥಿಗಾಗಿ ಬಲೆ ಬೀಸಿದ್ದಾರೆ.








