ಮಂಗಳೂರು: 12 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಪ್ರಾಂಶುಪಾಲರ ಹತ್ಯೆ ಕೇಸ್ ನಲ್ಲಿ ಭಾಗಿಯಾದವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಗಳ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ (Principal) ರ ಹತ್ಯೆ ಪ್ರಕರಣ 12 ವರ್ಷಗಳ ಸುದೀರ್ಘ ವಿಚಾರಣೆ ಕಂಡಿದೆ. ಈಗ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪುತ್ತೂರಿನ ಸೆಷನ್ಸ್ ನ್ಯಾಯಾಲಯದ ತೀರ್ಪು ರದ್ದುಪಡಿಸಿ ಹೈಕೋರ್ಟ್(High Court), ಹತ್ಯೆಯ ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಅಲ್ಲದೇ, ಜೀವಾವದಿ ಶಿಕ್ಷೆ ವಿಧಿಸಿದೆ.
ಪ್ರಾಂಶುಪಾಲರಾಗಿದ್ದ ಎ.ಎಸ್ ರಾಮಕೃಷ್ಣ ಅವರನ್ನು 2011ರ ಎಪ್ರಿಲ್ 28ರಂದು ಹತ್ಯೆ ಮಾಡಲಾಗಿತ್ತು. ಸಹೋದರ ಡಾ. ರೇಣುಕಾಪ್ರಸಾದ್ ಸೇರಿದಂತೆ ಏಳು ಜನ ಆರೋಪಿಗಳನ್ನು ಖುಲಾಸೆಗೊಳಿಸಿ 2016ರಲ್ಲಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ಪ್ರಕಟಿಸಿತ್ತು.
ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು. ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮೇಲ್ಮನವಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಪುತ್ತೂರು ಸೆಷನ್ಸ್ ಕೋರ್ಟ್ ತೀರ್ಪು ರದ್ದು ಪಡಿಸಿದೆ. ಕೊಲೆ ಮಾಡಿರುವುದು ಸಾಕ್ಷ್ಯಾಧಾರ ಸಹಿತ ದೃಢವಾಗಿದೆ. ಆದ್ದರಿಂದ ಕೊಲೆ ಮತ್ತು ಅಪರಾಧಿಕ ಒಳಸಂಚಿನ ಆರೋಪದಡಿ ನ್ಯಾಯಮೂರ್ತಿ ಶ್ರೀನಿವಾಸ್, ಹರೀಶ್ ಕುಮಾರ್ ಹಾಗೂ ಜಿ.ಬಸವರಾಜ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ದೋಷಿ ಎಂದು ತೀರ್ಪು ನೀಡಿ, ಆರೋಪಿಗಳಾಗಿದ್ದ ಡಾ.ರೇಣುಕಾ ಪ್ರಸಾದ್, ಮನೋಜ್ ರೈ, ಎಚ್.ಆರ್. ನಾಗೇಶ್, ವಾಮನ ಪೂಜಾರಿ, ಶರಣ್ ಪೂಜಾರಿ ಮತ್ತು ಶಂಕರಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. 7ನೇ ಆರೋಪಿಯಾಗಿದ್ದ ಎಚ್.ಯು. ನಾಗೇಶ್ ಕುಮಾರ್ ಪ್ರಕರಣದಿಂದ ಖುಲಾಸೆಯಾಗಿದ್ದಾರೆ.
ಕುರುಂಜಿ ವೆಂಕಟರಮಣ ಗೌಡ ಕೆವಿಜಿ ಎಜುಕೇಷನ್ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಇವರ ಹಿರಿಯ ಪುತ್ರ ಕೆ.ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ಆಡಳಿತ ವಹಿಸಲಾಗಿತ್ತು. ಮತ್ತೊಬ್ಬ ಪುತ್ರ ಮೃತ ಎ.ಎಸ್. ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿದ್ದರು. ಆಸ್ತಿ ಹೊಣೆಗಾರಿಕೆ ವಿಭಜನೆ ರಾಮಕೃಷ್ಣ ಅವರ ಸಲಹೆ ಮೇರೆಗೆ ಆಗಿತ್ತು. ಹೀಗಾಗಿ ರೇಣುಕಾ ಪ್ರಸಾದ್ ಅವರು ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು ಎಂಬುವುದು ಸಾಬೀತಾಗಿದ್ದು, ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಎ1 ಆರೋಪಿ ರೇಣುಕಾ ಪ್ರಸಾದ್ ಶಿಕ್ಷೆಯೊಂದಿಗೆ ಮೃತರ ಪತ್ನಿಗೆ ಹತ್ತು ಲಕ್ಷ ರೂ. ಪರಿಹಾರ ಮೊತ್ತ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.