ಪೃಥ್ವಿ ಶಾ… ಟೀಮ್ ಇಂಡಿಯಾದ ಭರವಸೆಯ ಯುವ ಆರಂಭಿಕ ಆಟಗಾರ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿದ್ದ ಪೃಥ್ವಿ ಶಾ ಅದ್ಯಾಕೋ ಸ್ವಲ್ಪ ದಿನ ಮರೆಯಾಗಿಬಿಟ್ಟಿದ್ದರು. ಸಚಿನ್, ಬ್ರಿಯನ್ ಲಾರಾ ಹಾಗೂ ರಿಕಿ ಪಾಂಡಿಂಗ್ ಅವರ ಕ್ರಿಕೆಟ್ ಕಲೆಗಳನ್ನು ಮೈಗೂಡಿಸಿಕೊಂಡಿರುವ ಪೃಥ್ವಿ ಶಾ ಎಷ್ಟು ಅದೃಷ್ವಂತನೋ ಅಷ್ಟೇ ನತದೃಷ್ಟ ಕೂಡ. ಯಾಕಂದ್ರೆ ಪೃಥ್ವಿ ಶಾ ತನ್ನ ಅದ್ಭುತ ಪ್ರತಿಭೆಯಿಂದಲೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರುವುದು. ಆದ್ರೆ ಗಾಯ ಹಾಗೂ ಡೋಪಿಂಗ್ ಬಲೆಯೊಳಗೆ ಬಿದ್ದ ಪೃಥ್ವಿ ಶಾ ಆಲ್‍ಮೋಸ್ಟ್ ಒಂದು ವರ್ಷ ಕ್ರಿಕೆಟ್ ನಿಂದಲೇ ದೂರ ಉಳಿದಿದ್ದರು. ಆದ್ರೆ ನಂತರ ಮತ್ತೆ ಟೀಮ್ ಇಂಡಿಯಾದೊಳಗೆ ಸ್ಥಾನ ಪಡೆದರೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿರಲಿಲ್ಲ. ಆದ್ರೂ ಪೃಥ್ವಿ ಶಾ ಭವಿಷ್ಯದ ಟೀಮ್ ಇಂಡಿಯಾದ ಆಟಗಾರ ಎಂಬುದನ್ನು ಮರೆಯುವ ಹಾಗಿಲ್ಲ.
ಇದೀಗ ಪೃಥ್ವಿ ಶಾ ಲಾಕ್ ಡೌನ್ ಟೈಮ್ ನಲ್ಲಿ ಇಂಡಿಯನ್ ಆಯಿಲ್ ಉದ್ಯೋಗಿಗಳ ಜತೆ ಕೆಲವೊಂದು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲೂ ಸಚಿನ್ ತೆಂಡುಲ್ಕರ್ ತನ್ನ ಕ್ರಿಕೆಟ್ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರಿದ್ರು ಎಂಬುದನ್ನು ಹೇಳಿಕೊಂಡಿದ್ದಾರೆ.
ಸಚಿನ್ ಸಾರ್ ನನ್ನ ಕ್ರಿಕೆಟ್ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದಾರೆ. ನನಗೆ ಸಚಿನ್ ಸಾರ್ ಅವರೇ ಪ್ರೇರಣೆ. ಸಚಿನ್ ಸಾರ್ ಬಳಿ ನಾನು ಬ್ಯಾಟಿಂಗ್ ಟೆಕ್ನಿಕ್ ಬಗ್ಗೆ ಅಷ್ಟೊಂದು ತಿಳಿದುಕೊಂಡಿಲ್ಲ. ಆದ್ರೂ ನನಗೆ ಕೆಲವೊಂದು ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ನನ್ನನ್ನು ಗಟ್ಟಿಗೊಳ್ಳುವಂತೆ ಸ್ಪೂರ್ತಿಯ ಮಾತುಗಳನ್ನು ಹೇಳಿದ್ದಾರೆ ಅಂತ ಪೃಥ್ವಿ ಶಾ ಹೇಳಿದ್ದಾರೆ.
ನಾನು ನನ್ನ ಎಂಟರ ಹರೆಯದಲ್ಲಿ ಸಚಿನ್ ಸಾರ್ ಅವರನ್ನು ಭೇಟಿಯಾಗಿದ್ದೆ. ಅಲ್ಲಿಂದ ನನಗೆ ಅವರೇ ಮೆಂಟರ್. ಯಾಕಂದ್ರೆ ಸಚಿನ್ ಸಾರ್ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಮೈದಾನದಲ್ಲಿ, ಮೈದಾನದ ಹೊರಗಡೆ ಯಾವ ರೀತಿ ಇರಬೇಕು, ಬದುಕಿನಲ್ಲಿ ಶಿಸ್ತನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು, ಬದ್ಧತೆ, ಏಕಾಗ್ರತೆಯನ್ನು ಯಾವ ರೀತಿ ಕಾಯ್ದುಕೊಳ್ಳಬೇಕು ಎಂಬುದನ್ನೆಲ್ಲಾ ನನಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಅಂತ ಶಾ ಹೇಳ್ತಾರೆ.
ನಾನು ಎಲ್ಲೇ ಅಭ್ಯಾಸ ಮಾಡುತ್ತಿರುವಾಗ ಕೂಡ ಅಲ್ಲಿ ಸಚಿನ್ ಸಾರ್ ಇದ್ರೆ ನನ್ನನ್ನು ಗಮನಿಸ್ತಾ ಇರುತ್ತಾರೆ. ಅಲ್ಲದೆ ನನ್ನ ಜೊತೆ ಮಾತನಾಡುತ್ತಾರೆ. ನನ್ನ ಬ್ಯಾಟಿಂಗ್ ಟೆಕ್ನಿಕ್ ಬಗ್ಗೆ ಹೆಚ್ಚು ಏನನ್ನು ಹೇಳುವುದಿಲ್ಲ. ಆದ್ರೆ ಮಾನಸಿಕವಾಗಿ ನನ್ನನ್ನು ಗಟ್ಟಿಗೊಳ್ಳುವಂತೆ ಮಾಡ್ತಾರೆ, ಸಚಿನ್ ಅವರ ಮಾರ್ಗದರ್ಶನ ನನಗೆ ಸಿಕ್ಕಿರುವುದು ನನ್ನ ಪುಣ್ಯ. ಅದೇ ರೀತಿ ಹಲವಾರು ತರಬೇತುದಾರರು ಕೂಡ ನನ್ನ ಕ್ರಿಕೆಟ್ ಬದುಕಿಗೆ ಸಹಾಯ, ಮಾರ್ಗದರ್ಶನ ಮಾಡಿದ್ದಾರೆ ಎಂಬುದನ್ನು ಹೇಳಲು ಶಾ ಮರೆಯಲಿಲ್ಲ.
ಅಂದ ಹಾಗೇ ಪೃಥ್ವಿ ಶಾ 2009ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮುಂಬೈನ ಬ್ರೆಬೊರ್ನ್ ಅಂಗಣದಲ್ಲಿ ಬಾಲ್ ಬಾಯ್ ಆಗಿದ್ರಂತೆ. ಆ ಪಂದ್ಯದಲ್ಲಿ ಸೆಹ್ವಾಗ್ ಮನಮೋಹಕ 293 ರನ್ ಸಿಡಿಸಿದ್ದರು ಎಂಬುದನ್ನು ಪೃಥ್ವಿ ಶಾ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
ಇತ್ತೀಚೆಗೆ ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಪೃಥ್ವಿ ಶಾ ಬಗ್ಗೆ ಹೇಳಿಕೊಂಡಿದ್ದರು. ಹೌದು, ನಾನು ಹಲವಾರು ಬಾರಿ ಪೃಥ್ವಿ ಶಾ ಜೊತೆ ಮಾತುಕತೆ ನಡೆಸಿದ್ದೇನೆ. ಪೃಥ್ವಿ ಶಾ ಅದ್ಭುತ ಪ್ರತಿಭಾವಂತ ಆಟಗಾರ. ಅವನಿಗೆ ಸಹಾಯ, ಮಾರ್ಗದರ್ಶನ ನೀಡುವುದರಲ್ಲಿ ನನಗೆ ಖುಷಿ ಇದೆ. ಆತನ ಜೊತೆಗೆ ಕ್ರಿಕೆಟ್ ಮತ್ತು ಬದುಕು ಹೇಗಿರುತ್ತೆ ಎಂಬುದರ ಬಗ್ಗೆ ಭೋದನೆ ಮಾಡಿದ್ದೇನೆ ಅಂತ ಹೇಳಿದ್ದರು.








