ವಿಜಯ ಹಜಾರೆ ಟ್ರೋಫಿ- ಪೃಥ್ವಿ ಶಾ ರನ್ ಮಳೆ ಹಿಂದಿದೆ ಕ್ರಿಕೆಟ್ ದೇವ್ರ ಮಿಂಚು…!
#ಪೃಥ್ವಿ ಶಾ… ಎರಡು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಎಂಟ್ರಿಯಾಗಿದ್ದಾಗ ಶಾ ಮೇಲಿದ್ದ ನಿರೀಕ್ಷೆಗಳು, ಭರವಸೆಗಳು ಅಷ್ಟಿಷ್ಟಲ್ಲ. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಅಂತ ಬಿಂಬಿಸಲಾಗಿದ್ದ ಶಾ ಕೂಡ ಆರಂಭದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು.
ಆನಂತರ ಏನಾಯ್ತೋ ಗೊತ್ತಿಲ್ಲ. ಸಡನ್ ಆಗಿ ಕುಸಿದು ಬಿದ್ದ ಪೃಥ್ವಿ ಶಾ ಮೇಲೆ ನಾನಾ ಟೀಕೆಗಳು, ಆರೋಪಗಳು ಕೇಳಿಬಂದವು. ಉದ್ದೀಪನಾ ದ್ರವ್ಯ ಸೇವನೆಯ ಆರೋಪಕ್ಕೆ ಬಲಿಯಾಗಿ ಕೆಲವು ತಿಂಗಳು ನಿಷೇಧಕ್ಕೂ ಗುರಿಯಾಗಿದ್ದರು.
ಅಷ್ಟರಲ್ಲೇ ಫಾರ್ಮ್ ಕೂಡ ಕಳೆದುಕೊಂಡ ಪೃಥ್ವಿ ಶಾ ಎದುರಾಳಿ ಬೌಲರ್ ಗಳಿಗೆ ಸುಲಭವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಕಳೆದ ಐಪಿಎಲ್ ನಲ್ಲೂ ನೀರಸ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಆನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಪೃಥ್ವಿ ಶಾ ಟೀಮ್ ಇಂಡಿಯಾದಿಂದ ಹೊರನಡೆಯಬೇಕಾಯ್ತು.
ಹಾಗೇ ಬಂದ ಪೃಥ್ವಿ ಶಾ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಕಳಪೆ ಫಾರ್ಮ್, ಟೀಕೆಗಳು 21ರ ಹರೆಯದ ಪೃಥ್ವಿ ಶಾ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಆದ್ರೆ ಮಾನಸಿಕವಾಗಿ ಕುಂದಲಿಲ್ಲ.
ತನ್ನ ಭವಿಷ್ಯದ ಬಗ್ಗೆ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿರುವ ಪೃಥ್ವಿ ಶಾ ತಾನು ಎಡವುತ್ತಿರುವುದು ಎಲ್ಲಿ ? ಯಾಕೆ ಎಡವುತ್ತಿದ್ದೇನೆ.? ಬ್ಯಾಟಿಂಗ್ ಟೆಕ್ನಿಕ್ ನಲ್ಲಿರುವ ಸಮಸ್ಯೆ ಏನು ಎಂಬುದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು.
ಆಗ ಪೃಥ್ವಿ ಶಾ ಗೆ ನೆನಪಾಗಿದ್ದು ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್. ತನ್ನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗೋದು ಕ್ರಿಕೆಟ್ ದೇವ್ರ ಬಳಿಯೇ. ಹಾಗೇ ಪೃಥ್ವಿ ಶಾ ಸಚಿನ್ ತೆಂಡುಲ್ಕರ್ ಅವರ ಮೊರೆ ಹೋಗಿದ್ದರು.
ಸಚಿನ್ ತೆಂಡುಲ್ಕರ್ ಪೃಥ್ವಿ ಶಾ ಮಾಡಿರುವ ಎಡವಟ್ಟುಗಳು, ಬ್ಯಾಟಿಂಗ್ ತಾಂತ್ರಿಕ ಸಮಸ್ಯೆಗಳನ್ನು ಬೊಟ್ಟು ಮಾಡಿ ತೋರಿಸಿದ್ದರು. ಅಲ್ಲದೆ ಯಾವ ರೀತಿ ಆಡಬೇಕು, ಯಾವ ರೀತಿಯ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸಚಿನ್ ತೆಂಡುಲ್ಕರ್ ಪೃಥ್ವಿ ಶಾಗೆ ಮನವರಿಕೆ ಮಾಡಿಕೊಟ್ಟಿದ್ದರು.
ಅದರ ಫಲವನ್ನು ಈಗ ಪೃಥ್ವಿ ಶಾ ಅನುಭವಿಸುತ್ತಿದ್ದಾರೆ. ವಿಜಯ ಹಜಾರೆ ಟ್ರೋಫಿಯಲ್ಲಿ ಪೃಥ್ವಿ ಶಾ ಬ್ಯಾಟಿಂಗ್ ವೈಭವವನ್ನು ನೋಡಿದಾಗ ಗೊತ್ತಾಗುತ್ತೆ. ಪೃಥ್ವಿ ಶಾ ಎಷ್ಟೊಂದು ಬದಲಾಗಿಬಿಟ್ಟಿದ್ದಾರೆ ಅಂತ. ಒಂದು ದ್ವಿ ಶತಕ, ಮೂರು ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 754 ರನ್ ಪೇರಿಸಿ ಮಯಾಂಕ್ ಅಗರ್ ವಾಲ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. 2017-18ರಲ್ಲಿ ಮಯಾಂಕ್ ಅಗರ್ ವಾಲ್ 723 ರನ್ ಸಿಡಿಸಿದ್ದರು. ಇದೀಗ ಮತ್ತೆ ಪೃಥ್ವಿ ಶಾ ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದಾರೆ. ಫೈನಲ್ ಮ್ಯಾಚ್ ನಲ್ಲೂ ಪೃಥ್ವಿ ಶಾ ರನ್ ಮಳೆಯನ್ನು ಸುರಿಸುತ್ತಾರೆ ಅನ್ನೋ ನಂಬಿಕೆ ಇದೆ.
ಆದ್ರೆ ಪೃಥ್ವಿ ಶಾ ಈಗ ಪಾಠ ಕಲಿತಿದ್ದಾರೆ. ಅದ್ಭುತ ಪ್ರತಿಭಾವಂತ ಆಟಗಾರನಾಗಿದ್ರೂ ಎಲ್ಲೋ ಒಂದು ಕಡೆ ಯಶಸ್ಸಿನ ಆಮಲಿನಿಂದ ತೇಲಾಡುತ್ತಿದ್ದರು. ಇದೀಗ ಬುದ್ದಿ ಬಂದಿದೆ.
ಹಾಗೇ ನೋಡಿದ್ರೆ ಪೃಥ್ವಿ ಶಾ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದೇ ದೊಡ್ಡ ವಿಚಾರ. ಯಾಕಂದ್ರೆ ಕಳೆದ ಐಪಿಎಲ್ ನಲ್ಲಿ ಶಾ ಬ್ಯಾಟ್ ಝಳಪಿಸಿರಲಿಲ್ಲ.
ಆದ್ರೂ ಶಾ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನ ಕಳಪೆ ಆಟದಿಂದ ಅವರು ತನ್ನ ಸ್ಥಾನವನ್ನು ಶುಬ್ಮನ್ ಗಿಲ್ ಅವರಿಗೆ ಬಿಟ್ಟುಕೊಡಬೇಕಾಯ್ತು.
ತಂಡದಿಂದ ಕೈಬಿಟ್ಟಾಗ ಪೃಥ್ವಿ ಶಾ ಕಣ್ಣೀರು ಹಾಕಿದ್ದರು. ಆದ್ರೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳದೇ ಇದ್ರೆ ತಂಡದಲ್ಲಿ ತನಗೆ ಸ್ಥಾನ ಸಿಗುವುದಿಲ್ಲ ಎಂಬುದು ಅವರಿಗೆ ಮನವರಿಕೆ ಆಗಿತ್ತು. ಅದೇ ವೇಳೆ ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದರು. ಸಚಿನ್ ತೆಂಡುಲ್ಕರ್ ದೇವರಂತೆ ಪೃಥ್ವಿ ಶಾಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆರವಾದ್ರು.
ಒಟ್ಟಿನಲ್ಲಿ ಪೃಥ್ವಿ ಶಾಗೆ ಮನವರಿಕೆಯಾಗಿದೆ. ಪ್ರತಿಭೆ ಇದ್ರೂ ಕಠಿಣ ಪರಿಶ್ರಮಪಟ್ಟರೇ ಮಾತ್ರ ಫಲ ಸಿಗುತ್ತೆ ಅಂತ.
#PrithviShaw #vijayahajaretrophi #sachintendulkar #ravishastri #vikramrathod #teamindia #kannadanews #sportsnews #kannadasportsnews