ಬೆಂಗಳೂರು: ಶಾಲಾ ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವುದನ್ನು ಬಿಟ್ಟು ಬೀದಿ ನಾಯಿಗಳ ಸಮೀಕ್ಷೆ ನಡೆಸಬೇಕೇ? ಎಂದು ಪ್ರಶ್ನಿಸುವ ಮೂಲಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಗ್ರೇಟರ್ ಬೆಂಗಳೂರು ಆಥಾರಿಟಿ (GBA) ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿದೆ. ಬೆಂಗಳೂರು ದಕ್ಷಿಣ ವಲಯದ ಜಿಬಿಎ ಆಯುಕ್ತರು ಶೈಕ್ಷಣಿಕ ಸಂಸ್ಥೆಗಳಿಗೆ ನೀಡಿರುವ ವಿಚಿತ್ರ ಆದೇಶವೊಂದು ಈಗ ಶಿಕ್ಷಣ ವಲಯದಲ್ಲಿ ಭಾರೀ ಸಂಚಲನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ತಮ್ಮ ಶಾಲಾ ಆವರಣದ ಸುತ್ತಮುತ್ತಲಿರುವ ಬೀದಿ ನಾಯಿಗಳ ಸಮೀಕ್ಷೆ ನಡೆಸಿ, ಅವುಗಳ ಸಂಖ್ಯೆಯನ್ನು ವರದಿ ಮಾಡುವಂತೆ ಜಿಬಿಎ ಆಯುಕ್ತರು ಶಾಲೆಗಳಿಗೆ ಸೂಚನೆ ನೀಡಿದ್ದರು. ಈ ಕ್ರಮವನ್ನು ಖಾಸಗಿ ಶಾಲೆಗಳ ಒಕ್ಕೂಟವು ಬಲವಾಗಿ ಖಂಡಿಸಿದೆ. ಶಿಕ್ಷಕರು ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಮತ್ತು ಅನ್ಯ ಕೆಲಸಗಳ ಒತ್ತಡದಿಂದ ನಲುಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೀದಿ ನಾಯಿಗಳ ಲೆಕ್ಕ ಹಾಕುವ ಜವಾಬ್ದಾರಿಯನ್ನು ಶಿಕ್ಷಕರ ಹೆಗಲಿಗೆ ಕಟ್ಟುವುದು ಎಷ್ಟು ಸರಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಅವರು ಆಯುಕ್ತರಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಶಿಕ್ಷಕರ ಕೆಲಸ ಬೋಧನೆಯೇ ಹೊರತು ಪ್ರಾಣಿ ಗಣತಿಯಲ್ಲ
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಡಿ.ಶಶಿಕುಮಾರ್, ಶಿಕ್ಷಕರ ಮೂಲ ಜವಾಬ್ದಾರಿ ಮಕ್ಕಳ ಭವಿಷ್ಯ ರೂಪಿಸುವುದು ಮತ್ತು ಅವರ ಕಲಿಕೆಗೆ ನೆರವಾಗುವುದು. ಈಗಾಗಲೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಹೊರೆ ಶಿಕ್ಷಕರ ಮೇಲಿದೆ. ಹೀಗಿರುವಾಗ ಆಡಳಿತ ಮಂಡಳಿ ಅಥವಾ ಜಿಬಿಎ ಮಾಡಬೇಕಾದ ಕೆಲಸವನ್ನು ಶಿಕ್ಷಕರ ಮೇಲೆ ಹೇರುವುದು ಅವೈಜ್ಞಾನಿಕ ಮತ್ತು ಖಂಡನೀಯ. ದಯವಿಟ್ಟು ಇಂತಹ ಅನಗತ್ಯ ಹೊರೆಯನ್ನು ನಮ್ಮ ಶಿಕ್ಷಕರ ಮೇಲೆ ಹೊರಿಸಬೇಡಿ ಎಂದು ಅವರು ಪತ್ರದಲ್ಲಿ ಕಟುವಾಗಿ ಆಗ್ರಹಿಸಿದ್ದಾರೆ.
ತ್ಯಾಜ್ಯ ವಿಲೇವಾರಿಯಲ್ಲಿ ಪ್ರಾಧಿಕಾರ ವಿಫಲ
ಶಾಲಾ ಆವರಣದ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣವೇ ಅಸಮರ್ಪಕ ತ್ಯಾಜ್ಯ ನಿರ್ವಹಣೆ. ಶಾಲೆಗಳ ಬಳಿ ಬಿದ್ದಿರುವ ಕಸದ ರಾಶಿ ನಾಯಿಗಳನ್ನು ಆಕರ್ಷಿಸುತ್ತಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ, ಶಾಲಾ ಆವರಣದ ಸಮೀಪ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಜಿಬಿಎ ವಿಫಲವಾಗಿದೆ. ತನ್ನ ಕರ್ತವ್ಯದಲ್ಲಿ ವಿಫಲವಾಗಿರುವ ಪ್ರಾಧಿಕಾರ, ನಾಯಿಗಳ ನಿಯಂತ್ರಣಕ್ಕೆ ಶಾಲೆಗಳ ಮೇಲೆ ಸವಾರಿ ಮಾಡುವುದು ಸರಿಯಲ್ಲ ಎಂದು ಒಕ್ಕೂಟ ಕಿಡಿಕಾರಿದೆ.
ಸುಪ್ರೀಂ ಕೋರ್ಟ್ ತನ್ನ ಯಾವುದೇ ಆದೇಶದಲ್ಲಿ ಶಾಲಾ ಶಿಕ್ಷಕರಿಂದ ಬೀದಿ ನಾಯಿಗಳ ಗಣತಿ ಮಾಡಿಸಬೇಕೆಂದು ಹೇಳಿಲ್ಲ. ಆದರೆ ಆಯುಕ್ತರು ತಮ್ಮ ಆದೇಶದ ಮೂಲಕ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾನೂನಿನ ಪ್ರಕಾರ ಬೀದಿ ಪ್ರಾಣಿಗಳನ್ನು ನಿಯಂತ್ರಿಸುವುದು, ಅವುಗಳಿಗೆ ಲಸಿಕೆ ಹಾಕುವುದು ಮತ್ತು ಅವುಗಳ ಮೇಲೆ ನಿಗಾ ಇಡುವುದು ಸಂಪೂರ್ಣವಾಗಿ ಸ್ಥಳೀಯ ನಗರ ಆಡಳಿತದ (ಜಿಬಿಎ) ಜವಾಬ್ದಾರಿಯಾಗಿದೆ ಎಂದು ಶಶಿಕುಮಾರ್ ಪತ್ರದಲ್ಲಿ ಕಾನೂನು ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಕಳುಹಿಸುವುದಿಲ್ಲ
ಖಾಸಗಿ ಶಾಲೆಗಳು ತಮ್ಮ ಆವರಣದ ಸ್ವಚ್ಛತೆ ಕಾಪಾಡಲು ಮತ್ತು ಮಕ್ಕಳ ಸುರಕ್ಷತೆಗಾಗಿ ಆವರಣದೊಳಗೆ ನಾಯಿಗಳು ಬಾರದಂತೆ ತಡೆಯಲು ಸಿದ್ಧವಿವೆ. ಆದರೆ, ಶಾಲಾ ಆವರಣದ ಹೊರಗೆ ಹೋಗಿ ಬೀದಿ ನಾಯಿಗಳ ಸಮೀಕ್ಷೆ ನಡೆಸಲು ಸಾಧ್ಯವೇ ಇಲ್ಲ. ಈ ಕಾರ್ಯಕ್ಕೆ ನಾವು ಶಿಕ್ಷಕರನ್ನು ಕಳುಹಿಸುವುದಿಲ್ಲ ಎಂದು ಕ್ಯಾಮ್ಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ಜಿಬಿಎ ಹೊರಡಿಸಿರುವ ಈ ಆದೇಶವು ಶಿಕ್ಷಣ ಸಂಸ್ಥೆಗಳು ಮತ್ತು ಪ್ರಾಧಿಕಾರದ ನಡುವಿನ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.








