ಬೆಂಗಳೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ “ಕಾಮನ್ ಸೆನ್ಸ್ ಇಲ್ಲ” ಎಂದು ಟೀಕಿಸಿದ ವಿಪಕ್ಷ ನಾಯಕ ಆರ್. ಅಶೋಕ್ ಅವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾವು ಚುನಾವಣಾ ಆಯೋಗದ ವಿರುದ್ಧ ಪ್ರಶ್ನೆ ಎತ್ತುತ್ತಿದ್ದರೆ, ಬಿಜೆಪಿ ನಾಯಕರಿಗೆ ಯಾಕೆ ಉರಿ? ನೀವೇನು ಆಯೋಗದ ವಕ್ತಾರರೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರ ಸಾಮಾನ್ಯ ಪ್ರಜ್ಞೆ ಬಗ್ಗೆ ಮಾತನಾಡುವ ಆರ್. ಅಶೋಕ್ ಅವರು ಯಾವ ಮಹಾ ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ಮಾತನಾಡುತ್ತಿದ್ದಾರೆ? ಮೊದಲು ನೀವು ಸಾಮಾನ್ಯ ಜ್ಞಾನದಿಂದ ಮಾತನಾಡಲು ಕಲಿಯಿರಿ. ನಾವು ಯಾವುದೇ ಆರೋಪ ಮಾಡಿದರೂ ಅದಕ್ಕೆ ಪೂರಕವಾದ ಪುರಾವೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇವೆ” ಎಂದು ಸವಾಲು ಹಾಕಿದರು.
“ಆವಾಗ ಏನ್ ಕತ್ತೆ ಕಾಯ್ತಿದ್ರಾ?”
ಈ ವಿವಾದದ ಮೂಲವನ್ನು ಕೆದಕಿದ ಪ್ರಿಯಾಂಕ್ ಖರ್ಗೆ, “2023ರಲ್ಲಿ ಶಾಸಕ ಬಿ.ಆರ್. ಪಾಟೀಲ್ ಅವರು ಇದೇ ವಿಚಾರವಾಗಿ ಧ್ವನಿ ಎತ್ತಿದ್ದರು. ಆಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಿಮ್ಮದೇ ಬಿಜೆಪಿ ಸರ್ಕಾರವಿತ್ತು. ಆಗಲೇ ಈ ವಿಷಯದ ಬಗ್ಗೆ ತನಿಖೆ ಆರಂಭವಾಗಿತ್ತು. ಆ ಸಂದರ್ಭದಲ್ಲಿ ನೀವೆಲ್ಲ ಏನು ಕತ್ತೆ ಕಾಯುತ್ತಿದ್ದೀರಾ? ಮಾತೆತ್ತಿದರೆ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ನೀವು, ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲಿ ಹೋಗಿದ್ರಿ?” ಎಂದು ಅಶೋಕ್ ಹಾಗೂ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಿದ ಬಿಜೆಪಿ?
“ನಮ್ಮ ಪ್ರಶ್ನೆಗಳು ನೇರವಾಗಿ ಚುನಾವಣಾ ಆಯೋಗಕ್ಕೆ. ಆದರೆ ಅದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲು ಮುಂದೆ ಬರುತ್ತಿದ್ದಾರೆ. ಇದು ನೋಡಿದರೆ, ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಪ್ರಯತ್ನದಂತೆ ಕಾಣುತ್ತಿದೆ,” ಎಂದು ಖರ್ಗೆ ಆರೋಪಿಸಿದರು.
“ಈಗ ನಾವು ಮಾಹಿತಿ ಕೇಳಿದರೆ, ಅದನ್ನು ನೀಡಲು ಚುನಾವಣಾ ಆಯೋಗದ ಅಧಿಕಾರಿಗಳು ಭಯಪಡುತ್ತಿದ್ದಾರೆ. ಇದರ ಅರ್ಥವೇನು? ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆಯೇ?” ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗವನ್ನು ಗುರಿಯಾಗಿಸಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿರುವುದು ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಅವರ “ಕತ್ತೆ ಕಾಯ್ತಿದ್ರಾ” ಎಂಬ ತೀಕ್ಷ್ಣ ಹೇಳಿಕೆ, ಈ ವಿವಾದವನ್ನು ಮತ್ತಷ್ಟು ತಾರಕಕ್ಕೇರಿಸಿದೆ.








