ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ಖರ್ಗೆ ಇಡೀ ಕಾಂಗ್ರೆಸ್ನಲ್ಲಿ ನಂಬರ್ ಒನ್ ಎಂದು ಕಟುವಾಗಿ ಟೀಕಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಎಂಬ ಹೆಸರು ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರ ಕಾರಣದಿಂದಲೇ ರಾಜಕೀಯದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದ ಛಲವಾದಿ, ಖರ್ಗೆ ಎಂಬ ಹೆಸರು ಇಲ್ಲದೆ ಇದ್ದಿದ್ದರೆ ಪ್ರಿಯಾಂಕ್ ಖರ್ಗೆ ಮಂಡಲ ಪಂಚಾಯತ್ ಸದಸ್ಯನೂ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದು ಸಂಪೂರ್ಣವಾಗಿ ವಂಶಪಾರಂಪರ್ಯ ರಾಜಕೀಯದ ಉದಾಹರಣೆ ಎಂದು ಅವರು ಆರೋಪಿಸಿದರು.
ಇನ್ನೂ, ವಿಧಾನಸಭೆ ಅಥವಾ ವಿಧಾನಪರಿಷತ್ತಿನಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಸದನದಿಂದ ದೂರ ಉಳಿಯುತ್ತಾರೆ ಎಂದು ಟೀಕಿಸಿದ ಛಲವಾದಿ, ಅವರ ಸಾಧನೆ ಶೂನ್ಯವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು. ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವ ನೈತಿಕತೆ ಪ್ರಿಯಾಂಕ್ ಖರ್ಗೆಗೆ ಇಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವು ರಾಜಮನೆತನದ ಆಡಳಿತದಂತಾಗುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ವಂಶಪಾರಂಪರ್ಯವಾಗಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವೇ ಕಾಂಗ್ರೆಸ್ ರಾಜಕೀಯದ ಮೂಲ ಸ್ವಭಾವ ಎಂದು ಹೇಳಿದರು. ಈ ಮೂಲಕ ಪ್ರಿಯಾಂಕ್ ಖರ್ಗೆ ಹೇಳಿಕೆಗಳು ಹಾಗೂ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.








