‘ಜ್ಯೂ. ಇಂದಿರಾ’ಗೆ ಉತ್ತರಪ್ರದೇಶ ಕಾಂಗ್ರೆಸ್ ನಾಯಕತ್ವ..!
ಲಖನೌ : ಬಿಜೆಪಿ ಭದ್ರಕೋಟೆ ಉತ್ತರಪ್ರದೇಶದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಕಾಂಗ್ರೆಸ್ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಹೀಗಾಗಿ ಮುಂದಿನ 2022ರ ವಿಧಾನ ಸಭೆ ಚುನಾವಣೆಗೆ ಈಗಿನಿಂದಲೇ ಕೈ ಪಡೆ ತಯಾರಿ ಆರಂಭಿಸಿದೆ. ಉತ್ತರ ಪ್ರದೇಶ ಹೇಳಿ ಕೇಳಿ ಕೇಸರಿ ಪಡೆಯ ಭದ್ರಕೋಟೆ. ಇದರ ಮಧ್ಯೆ ಎಸ್ ಪಿ.ಬಿಎಸ್ ಪಿ ಕೂಡ ಕೆಲ ಭಾಗಗಳಲ್ಲಿ ತಮ್ಮ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿವೆ. ಇದರಿಂದಾಗಿ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿತ್ತು. ಆದ್ರೆ ಮುಂದಿನ ಚುನಾವಣೆಯಲ್ಲಿ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ರಣರಂಗಕ್ಕೆ ಇಳಿಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಪ್ರಿಯಾಂಕಾ ನಾಯಕತ್ವಕ್ಕೆ ಕಾರ್ಯಕರ್ತ ಪಟ್ಟು
2022 ರ ವಿಧಾನಸಭಾ ಚುನಾವಣೆ ಯುದ್ಧಕ್ಕೆ ಕಾದು ನೋಡುತ್ತಿರೋ ಕಾಂಗ್ರೆಸ್, ಹೀಗಿನಿಂದಲೇ ಸಮರಾಭ್ಯಾಸ ಆರಂಭಿಸಿದೆ. ಇದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲಖನೌ ನಲ್ಲಿ ನೆಲಸಲು ನಿರ್ಧಾರ ಮಾಡಿರೋದು ಮತ್ತಷ್ಟು ಬಲ ನೀಡಿದೆ.
ಇನ್ನು ಯುಪಿ ರಾಜಕಾರಣಕ್ಕೆ ಜ್ಯೂ. ಇಂದಿರಾ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಈಗಾಗಲೇ ಯೋಗಿ ನಾಡಲ್ಲಿ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ಪಡೆಯಲ್ಲಿ ಹೊಸ ಚೈತನ್ಯ ತುಂಬಿದೆ. ಹೀಗಾಗಿ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ‘ಮುಂದಿನ ಚುನಾವಣೆಯ ನೇತೃತ್ವವನ್ನು ಪ್ರಿಯಾಂಕಾ ಗಾಂಧಿ ಅವರು ವಹಿಸಬೇಕು’ ಎಂದು ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಮಾತನಾಡಿದ್ದು, ಉತ್ತರ ಪ್ರದೇಶದ ವಿಧಾನಸಭೆಗೆ 2022ರಲ್ಲಿ ನಡೆಯಲಿರುವ ಚುನಾವಣೆಯ ನೇತೃತ್ವವನ್ನು ಪ್ರಿಯಾಂಕಾ ಗಾಂಧಿ ಅವರು ವಹಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರ ನಿಲುವು. ಆದರೆ ಆ ಬಗ್ಗೆ ಅಂತಿಮ ತೀರ್ಮಾನವನ್ನು ಸ್ವತಃ ಪ್ರಿಯಾಂಕಾ ಹಾಗೂ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಅಲ್ಲದೇ ಇದೇ ವೇಳೆ ‘2022ರ ಚುನಾವಣೆಯಲ್ಲಿ ಕಾಂಗ್ರೆಸ್ ಯಾರ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ರಾಜಕಾರಣದ ಅಖಾಡಕ್ಕೆ ಇಳಿಯೋದು ಪಕ್ಕಾ ಎಂದು ಹೇಳಲಾಗುತ್ತಿದೆ.