ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್, ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ನಡುವೆ ರಾಜ್ಯಸಭೆ ಚುನಾವಣೆಯತ್ತ ಗಮನ ಕೇಂದ್ರೀಕರಿಸಿದೆ. ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕಾಂಗ್ರೆಸ್, ರಾಜ್ಯಸಭೆಗೆ ಯಾರನ್ನು ಕಳಿಸಬೇಕು ಎಂಬುದರ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಸಭೆಗೆ ಕಳಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
2019ರಲ್ಲಿ ಸಕ್ರಿಯ ರಾಜಕೀಯದಲ್ಲಿರುವ ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದ ಚುನಾವಣೆಯ ಉಸ್ತುವಾರಿಗಳಲ್ಲಿ ಒಬ್ಬರೆನಿಸಿದ್ದರು. ಇನ್ನೂ ಶಾಸಕಿಯೂ ಆಗಿರದ ಪ್ರಿಯಾಂಕಾ ಅವರನ್ನು ಮೇಲ್ಮನೆಗೆ ಕಳಿಸುವ ಬಗ್ಗೆ ಕಾಂಗ್ರೆಸ್ಸಿನಲ್ಲಿ ಒತ್ತಡ ಹೆಚ್ಚಾಗಿದೆ. ಛತ್ತೀಸ್ ಗಢ ದ ನಾಯಕರು ಈಗಾಗಲೇ ಪ್ರಿಯಾಂಕಾ ಗಾಂಧಿ ಪ್ರವೇಶವನ್ನು ಬೆಂಬಲಿಸಲು ಪ್ರಸ್ತಾವನೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದಾರೆ.
ಪಕ್ಷದ ಹಿರಿಯ ಸದಸ್ಯರಾದ ಅಂಬಿಕಾ ಸೋನಿ, ಗುಲಾಮ್ ನಬಿ ಆಜಾದ್ ಮತ್ತು ದಿಗ್ವಿಜಯ ಸಿಂಗ್ ಅವರ ರಾಜ್ಯಸಭೆ ಅಧಿಕಾರಾವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಛತ್ತೀಸ್ ಗಡ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯದ ಕೋಟಾದಿಂದ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.