ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಕೇರಳ (Kerala) ವಯನಾಡ್ (wayanad) ಲೋಕಸಭಾ ಕ್ಷೇತ್ರದಲ್ಲಿ (Loksabha Constituency) 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಅವರ ರಾಜೀನಾಮೆಯಿಂದ ತೆರವಾದ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರು. ಆದರೆ, ಮತದಾರರು ರಾಹುಲ್ ಗಿಂತಲೂ ಹೆಚ್ಚಾಗಿ ಬೆಂಬಲಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಇಂದು ಹೊರ ಬಂದ ಫಲಿತಾಂಶದಲ್ಲಿ 4,10,931 ಅಧಿಕ ಮತಗಳ ಅಂತರದಿಂದ ತಮ್ಮ ಮೊದಲ ಜಯ ಸಾಧಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಒಟ್ಟು 6,22,338 ಮತಗಳನ್ನು ಪಡೆದುಕೊಂಡಿದ್ದು, ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 2,11,407 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ನವ್ಯಾ ಹರಿದಾಸ್ ಸುಮಾರು 1,09,939 ಮತ ಪಡೆದಿದ್ದಾರೆ.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ರಾಯ್ ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಹುಲ್ ಗಾಂಧಿ, ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈಗ ಆ ಕ್ಷೇತ್ರದಿಂದ ಸಹೋದರಿ ಭರ್ಜರಿ ಜಯ ಸಾಧಿಸಿದ್ದಾರೆ. ರಾಹುಲ್ ಗಾಂಧಿ 3.64 ಲಕ್ಷ ಮತಗಳ ಅಂತರದಿಂದ ಒಟ್ಟು 6.47 ಲಕ್ಷ ಮತ ಪಡೆದು ಗೆದ್ದಿದ್ದರು. ಆದರೆ, ಪ್ರಿಯಾಂಕಾ ಗಾಂಧಿ 4.10 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.








