ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ (Stop Log Gate) ಅಳವಡಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ತಾಂತ್ರಿಕ ವರ್ಗಕ್ಕೆ 2 ಲಕ್ಷ ರೂ. ಬಹುಮಾನ ನೀಡಿ ಕೊಪ್ಪಳ (Koppal) ಸಂಸದ ರಾಜಶೇಖರ ಹಿಟ್ನಾಳ್ (Rajashekar Hitnal) ಸನ್ಮಾನಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ 19ನೇ ಗೇಟ್ ನಲ್ಲಿನ 5 ಸ್ಟಾಪ್ ಲಾಗ್ ಅಳವಡಿಕೆ ಈಗ ಯಶಸ್ವಿಯಾಗಿದೆ. ಹೀಗಾಗಿ ನೀರು ಪೋಲಾಗದಂತೆ ತಡೆ ಹಿಡಿಯಲಾಗಿದೆ. ಹೀಗಾಗಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಕಾರ್ಯಾಚರಣೆಯಲ್ಲಿ ಭಾಗಿಯಾದ ತಾಂತ್ರಿಕ ವರ್ಗಕ್ಕೆ (Technical Team) 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದ್ದಾರೆ.
ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಂಪ್ಲಿ ಶಾಸಕ ಜೆ.ಎನ್.ಗಣೇಶ (J N Ganesh) ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ಸಚಿವ ಜಮೀರ್ ಅಹಮ್ಮದ್ ಭರವಸೆ ನೀಡಿದಂತೆ ಕಾರ್ಯಕ್ರಮದಲ್ಲಿ ತಲಾ 50 ಸಾವಿರ ರೂ. ನಗದು ನೀಡಿ ಗೌರವಿಸಲಾಗಿದೆ. ನಾರಾಯಣ್ ಎಂಜಿನಿಯರಿಂಗ್, ಹಿಂದೂಸ್ತಾನಿ ಎಂಜಿನಿಯರಿಂಗ್ ಹಾಗೂ ಜಿಂದಾಲ್ ಕಂಪನಿ ಪ್ರತಿನಿಧಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.








