Pro kabaddi | ಪ್ರೋ ಕಬಡ್ಡಿ 2022- ಪಾಟ್ನಾ ಪೈರೆಟ್ಸ್ ಕನಸು ಭಗ್ನ.. ದಬಾಂಗ್ ಡೆಲ್ಲಿ ಚಾಂಪಿಯನ್..!
ಪ್ರತಿ ಕ್ಷಣ.. ಪ್ರತಿ ರೈಡ್.. ಪ್ರತಿ ಪಾಯಿಂಟ್ ಕೂಡ ರೋಚಕ.. ರೋಮಾಂಚನ… ವಾಹ್ಹ್ ಫೈನಲ್ ಪಂದ್ಯ ಅಂದ್ರೆ ಹಿಂಗಿರಬೇಕು.. ಕಬಡ್ಡಿ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಫೈನಲ್ ಪಂದ್ಯ.
ಹೌದು, ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಮೊಟ್ಟ ಮೊದಲ ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
ಆದ್ರೆ ಫೈನಲ್ ನಲ್ಲಿ ಒಂದೇ ಒಂದು ಅಂಕದಿಂದ ಸೋತ ಪಾಟ್ನಾ ಪೈರೆಟ್ಸ್ ತಂಡದ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತ್ತು.
ನವೀನ್ ಕುಮಾರ್ ಮತ್ತು ವಿಜಯ್ ಅವರ ಅಮೋಘ ಆಟದ ನೆರವನ್ನು ಪಡೆದ ದಬಾಂಗ್ ಡೆಲ್ಲಿ ತಂಡ 37-36ರಿಂದ ಪಾಟ್ನಾ ಪೈರೆಟ್ಸ್ ತಂಡವನ್ನು ಮಣಿಸಿತು.
ಹಾಗೇ ನೋಡಿದ್ರೆ ಮೊದಲಾರ್ಧದಲ್ಲಿ ಪಾಟ್ನಾ ಪೈರೆಟ್ಸ್ ತಂಡ ಮುನ್ನಡೆಯನ್ನು ಪಡೆದುಕೊಂಡಿತ್ತು. ಆದ್ರೆ ದ್ವಿತಿಯಾರ್ಧದಲ್ಲಿ ಮಾಡಿದ ಒಂದು ಸಣ್ಣ ಎಡವಟ್ಟಿನಿಂದ ಪಾಟ್ನಾ ಪೈರೆಟ್ಸ್ ತಂಡ ಸೋಲು ಅನುಭವಿಸಬೇಕಾಯ್ತು.
ಪಂದ್ಯದ ಆರಂಭದಿಂದಲೂ ಸಮಬಲದ ಹೋರಾಟ ಕಂಡುಬಂದಿತ್ತು. ಒಂದು ಹಂತದಲ್ಲಿ ಪಾಟ್ನಾ ಪೈರೆಟ್ಸ್ ತಂಡ ತುಸು ಮೆಲುಗೈ ಸಾಧಿಸಿತ್ತು.
ಆದ್ರೆ ಪಂದ್ಯ ಮುಗಿಯಲು ಹತ್ತು ನಿಮಿಷಗಳು ಬಾಕಿ ಇರುವಾಗ ದಬಾಂಗ್ ಡೆಲ್ಲಿ ತಂಡ24-24ರಿಂದ ಅಂತರವನ್ನು ಸಮಗೊಳಿಸಿತ್ತು.
ಈ ಹಂತದಲ್ಲಿ ಪಾಟ್ನಾ ಪೈರೆಟ್ಸ್ ತಂಡಕ್ಕೆ ನವೀನ್ ಮತ್ತು ವಿಜಯ್ ಕಂಟಕವಾಗಿ ಕಾಡಿದ್ರು. ಹಾಗೇ ಪೈರೆಟ್ಸ್ ತಂಡ ಅನಗತ್ಯ ತಪ್ಪುಗಳನ್ನು ಮಾಡಿಕೊಂಡಿತ್ತು.
ಆದ್ರೂ ಸೋಲನ್ನು ಒಪ್ಪಿಕೊಳ್ಳದ ಪಾಟ್ನಾ ಪೈರೆಟ್ಸ್ ತಂಡ ಕೊನೆಯ ತನಕ ಹೋರಾಟ ನಡೆಸಿದ್ರೂ ಪ್ರಯೋಜನವಾಗಲಿಲ್ಲ.
ನವೀನ್ ಕುಮಾರ್ 13 ಅಂಕ ಪಡೆದ್ರೆ, ವಿಜಯ್ 14 ಅಂಕ ಪಡೆದು ದಬಾಂಗ್ ಡೆಲ್ಲಿ ತಂಡದ ಗೆಲುವಿನ ರೂವಾರಿಯಾದ್ರು.
pro-kabaddi-Dabang Delhi beat Patna Pirates









