ಪ್ರೋಕಬಡ್ಡಿ ಪ್ರಿಯರಿಗೆ ಗುಡ್ ನ್ಯೂಸ್ – ಸೀಸನ್ 8 ಕ್ಕೆ ಮುಹೂರ್ತ ಫಿಕ್ಸ್ : ಬೆಂಗಳೂರಿಬನಲ್ಲೇ ಲೀಗ್..!
ಕೋವಿಡ್ ನಡುವೆಯೇ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ. ಈ ನಡುವೆ ಕಬಡ್ಡಿ ಪ್ರಿಯರು ಮುಂದಿನ ಪ್ರೋ ಕಬಡ್ಡಿ ಟ್ಯೂರ್ನಿ ಯಾವಾಗ ಅಂತ ಎದುರು ನೋಡ್ತಾಯಿದ್ದರು. ಆದ್ರೆ ಕ್ರಿಕೆಟ್ ಗೆ ಹೋಲಿಸಿದಾಗ ಕಬಡ್ಡಿಯಲ್ಲಿ ಒಬ್ಬರನ್ನೊಬ್ಬರು ಮುಟ್ಟುವುದು ಹೆಚ್ಚಾಗಿರುತ್ತೆ. ಅನಿವಾರ್ಯವೂ ಕೂಡ. ಮತ್ತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಕಷ್ಟಸಾಧ್ಯ. ಹೀಗಾಗಿ ಕಬಡ್ಡಿಗೆ ಅನುಮತಿ ನೀಡಿರಲಿಲ್ಲ.
ಆದ್ರೆ ಇದೀಗ ಕಬಡ್ಡಿ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಪ್ರೋ ಕಬಡ್ಡಿ 8ನೇ ಸೀಸನ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 22 ರಂದು ಬೆಂಗಳೂರಿನಲ್ಲಿ ಪ್ರೋ ಕಬಡ್ಡಿ ಲೀಗ್ ಆರಂಭವಾಗಲಿದೆ.
ಈ ಸೀಸನ್ ನ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಆಗಸ್ಟ್ 29-31 ರಂದು ಮುಂಬೈನಲ್ಲಿ ನಡೆಸಲಾಗಿದೆ. ಈ ಕ್ರೀಡಾಕೂಟದ ಸಂಘಟಕರಾದ ಮಾಶಾಲ್ ಸ್ಪೋರ್ಟ್ಸ್, ಆಟಗಾರರು ಮತ್ತು ಎಲ್ಲಾ ಪಾಲುದಾರರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷ ಲೀಗ್ ಅನ್ನು ಬೆಂಗಳೂರಿನಲ್ಲಿ ಒಂದೇ ಸ್ಥಳದಲ್ಲಿ ನಡೆಸಲಾಗುವುದು ಎಂದು ಹೇಳಲಾಗಿದೆ.
ಮಾಶಾಲ್ ಸ್ಪೋರ್ಟ್ಸ್ ಮತ್ತು ಲೀಗ್ ಕಮೀಷನರ್ ವಿವೋ ಪಿಎಲ್ ಸಿಇಒ ಅನುಪಮ್ ಗೋಸ್ವಾಮಿ ಅವರು ಪ್ರೋ ಕಬಡ್ಡಿ ಲೀಗ್ 8 ರ ಬಗ್ಗೆ ಮಾತನಾಡಿ ಉತ್ತಮ ಸುರಕ್ಷತಾ ಅಭ್ಯಾಸಗಳೊಂದಿಗೆ ದೊಡ್ಡ ಸ್ಪರ್ಧಾತ್ಮಕ ಕ್ರೀಡಾಕೂಟಗಳನ್ನು ನಡೆಸಲು ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿವೆ, ಮತ್ತು ನಾವು ಇದನ್ನು ಪ್ರದರ್ಶಿಸಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ಇನ್ನೂ ರಾಜ್ಯದಲ್ಲಿ ನಡೆಯಲಿರುವ ಪ್ರೋ ಕಬಡ್ಡಿ ಲೀಗ್ ಅನ್ನು ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದರು. ಕಬಡ್ಡಿ ಭಾರತದ ನಿಜವಾದ ಸ್ಥಳೀಯ ಕ್ರೀಡೆಯಾಗಿದೆ. ಮತ್ತು ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಸೀಸನ್ 8 ಅನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದಿದ್ದಾರೆ.
ಸರ್ಕಾರದ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ಲೀಗ್ ಪ್ರೋಟೋಕಾಲ್ ಗಳನ್ನು ಜಾರಿಗೊಳಿಸುತ್ತದೆ ಮತ್ತು ಕಠಿಣ ಸುರಕ್ಷತಾ ಅಭ್ಯಾಸಗಳನ್ನು ಜಾರಿಗೊಳಿಸಲು ಮತ್ತು ಜೈವಿಕ ಸುರಕ್ಷಿತೆಯ ಬಗ್ಗೆಯೂ ವಿಶೇಷ ಸುರಕ್ಷತಾ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.