ದಾವಣಗೆರೆ: ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಪರ ಗಟ್ಟಿಯಾಗಿ ನಿಲ್ಲಲು ದಾವಣಗೆರೆಯ ಹೋಟೆಲ್ ಒಂದರಲ್ಲಿ ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ಬಣದಿಂದ ಸಭೆ ಸೇರಿದ್ದು, ಹಲವು ವಿಚಾರಗಳು ಕುರಿತು ಚರ್ಚಿಸಲಾಗಿದೆ.
ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ 40ಕ್ಕೂ ಅಧಿಕ ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬದಂದು ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಪಕ್ಷದ ನಾಯಕರು ಮುಂದಾಗಿದ್ದಾರೆ.
ಬೃಹತ್ ಸಮಾವೇಶಕ್ಕೆ 20 ಲಕ್ಷ ಜನರನ್ನು ಸೇರಿಸುವ ಸಂಕಲ್ಪ ಮಾಡಲಾಗಿದೆ. ಇನ್ನೂ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವಂತೆ ಒತ್ತಾಯ ಮಾಡಲಾಗಿದೆ. ಅಲ್ಲದೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ, ಸಭೆಯಲ್ಲಿದ್ದ ಎಲ್ಲಾ ಮಾಜಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೇಟ್ ನೀಡುವಂತೆ ಮನವಿ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಜ್ಯಾಧ್ಯಕ್ಷರಿಗೆ ಬೆಂಬಲ ನೀಡಲು ಸಮವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.