ಬೆಂಗಳೂರು: ಮುಡಾ ಹಗರಣ ಕುರಿತಂತೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಮೂಲಕ ಎಫ್ ಐಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗುತ್ತದೆ.
ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿರುವ ಆರೋಪದ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿಎಂ ವಿರುದ್ಧ ಪ್ರಕರಣ ದಾಖಲಾಗಿರುವ ಸಂಬಂಧ ಸಂಪೂರ್ಣ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಪರ ಮತ್ತು ವಿರೋಧ ವಾದವನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದರು. ಅಷ್ಟರಲ್ಲಿ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಹೈಕೋರ್ಟ್ನಲ್ಲಿ ತೆರವಾಗಿರುವುದರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದ್ದು, ಸಿಎಂ ವಿರುದ್ದ ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶ ನೀಡಿದೆ.
ಮೂರು ತಿಂಗಳಲ್ಲಿ ಅಂದರೆ, ಡಿಸೆಂಬರ್ 24ರವಳಗೆ ಸಿಆರ್ಪಿಸಿ ಸೆಕ್ಷನ್ 156/3 ರ ಅಡಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಮೈಸೂರು ಲೋಕಾಯುಕ್ತ ಎಸ್ಪಿಗೆ ಸೂಚಿಸಲಾಗಿದೆ.
ತೀರ್ಪಿನಲ್ಲಿ ಪ್ರಕರಣ ದಾಖಲಿಸಲು ಲೋಕಾಯುಕ್ತಕ್ಕೆ ಅನುಮತಿ ನೀಡಿದ ಹಿನ್ನೆಲೆ ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬಿಕರ್ ಸೂಚನೆ ಮೇರೆಗೆ ಮೈಸೂರಿನ ಲೋಕಾಯುಕ್ತ ಎಸ್ಪಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ.