ತುಮಕೂರು : ಬೆಂಗಳೂರಿನಿಂದ ಬಂದವರಿಂದಲೇ ಗ್ರಾಮೀಣ ಪ್ರದೇಶಗಳಿಗೂ ಕೊರೊನಾ ವೈರಸ್ ಹಬ್ಬಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ. ತುಮಕೂರಿನಲ್ಲಿ ಇಂದು ಮಾಧುಸ್ವಾಮಿ ಅವರು ಪಿಪಿಇ ಕಿಟ್ ಗಳನ್ನು ವಿತರಿಸಿದರು. ಬಳಿಕ ಜಿಲ್ಲೆಯಲ್ಲಿ ಕೊರೊನಾ ಸ್ಫೋಟದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಟೈನ್ ಮೆಂಟ್ ಝೋನ್ ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ ನಂತರ ಏರಿಯಾ ಸೀಲ್ ಡೌನ್ ಮಾಡುತ್ತೇವೆ. ಬೆಂಗಳೂರಿನಿಂದ ಬಂದವರಿಂದ ಸಮಸ್ಯೆಯಾಗುತ್ತಿದೆ. ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ ಹಳ್ಳಿಗಳಲ್ಲಿ ಕೊರೊನಾ ಪ್ರಕರಣ ಬರುತ್ತಿರಲಿಲ್ಲ ಎಂದು ಹೇಳಿದರು.
ಬೆಂಗಳೂರಿನಿಂದ ಎಲ್ಲರೂ ಬಂದರು, ಹೋದರು ಮನೆ ಸೇರಿಕೊಂಡರೂ ಯಾರೂ ನಮಗೆ ಮಾಹಿತಿ ನೀಡಲಿಲ್ಲ. ಬೆಂಗಳೂರಿನಿಂದ ಜಿಲ್ಲೆಗೆ ಅಥವಾ ನಗರಕ್ಕೆ ಬರುವವರನ್ನು ಊರಿಗೆ ಸೇರಿಸಿ ಕೊಳ್ಳಬೇಡಿ. ಅಲ್ಲಿಂದ ಬಂದವರ ಬಗ್ಗೆ ಜಿಲ್ಲಾಡಳಿತಕ್ಕೆ,ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದ್ಯ ಕೋವಿಡ್ ಪರೀಕ್ಷೆ ಮಾಡಿದ 48 ಗಂಟೆ ಒಳಗೆ ರಿಸಲ್ಟ್ ಕೊಡುತ್ತಿದ್ದೇವೆ. ಅಲ್ಲಿವರೆಗೂ ಬೆಂಗಳೂರಿನಿಂದ ಬಂದವರು ಯಾರ ಸಂಪರ್ಕಕ್ಕೆ ಬರಬಾರದು. ಊರಿನ ಹೊರಗೆ ಅಥವಾ ಬೇರೆಲ್ಲಾದ್ರೂ ಪ್ರತ್ಯೇಕವಾಗಿ ವಾಸ್ತವ್ಯ ಹೂಡಬೇಕು. ಪರೀಕ್ಷೆ ವರದಿ ನೆಗೆಟಿವ್ ಬಂದರೆ ಮಾತ್ರ ಮನೆಗೆ ಹೋಗಲಿ,ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ದಾಖಲಿಸುತ್ತೇವೆ ಎಂದ ಮಾಧುಸ್ವಾಮಿ, ಹೊರಗಿನಿಂದ ಬಂದವರು ಜಿಲ್ಲಾಡಳಿತದ ನಿಯಮಾವಳಿ ಪಾಲಿಸದಿದ್ದರೆ ಅವರ ವಿರುದ್ಧ ಎಫ್ಐ ಆರ್ ದಾಖಲಿಸಲು ಅವಕಾಶವಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.