ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿರೀಕ್ಷೆಗೆ ಮೀರಿ ಹೆಚ್ಚಾಗುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು,ತಜ್ಞರು ಕೊಟ್ಟ ವರದಿ ಪ್ರಕಾರ ಅಂತರ್ ಜಿಲ್ಲಾ ವಾಹನಗಳ ಓಡಾಟ ನಿಷೇಧ ಮಾಡಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಕ್ಸಿಬಿಷನ್ ಸೆಂಟರ್ ನಲ್ಲಿ 10 ಸಾವಿರ ಬೆಡ್ ಅಂತ ಹೇಳ್ತಿದ್ದೀರಾ ಇದರ ನಿರ್ವಹಣೆಗೆ ಎಷ್ಟು ವೈದ್ಯರು, ಸಹಾಯಕರು ಬೇಕಾಗುತ್ತೆ. ಈ ವಿಚಾರದಲ್ಲಿ ಹುಡುಗಾಟಿಕೆ ಮಾಡಬೇಡಿ ಎಂದರು. ಪಿಜಿ ಸ್ಟೂಡೆಂಟ್, ಮೆಡಿಕಲ್ ಸ್ಟೂಡೆಂಟ್ ತಂದೆ-ತಾಯಿಗಳಿಗೂ ಆತಂಕ ಇರುತ್ತೆ. ಅವರಿಗೂ ಸರ್ಕಾರದ ಸವಲತ್ತು ಒದಗಿಸಿ, ಸಣ್ಣ-ಪುಟ್ಟ ಆಸ್ಪತ್ರೆಗಳು ಸಾಲ ಮಾಡಿ ಆಸ್ಪತ್ರೆ ಮಾಡಿರುತ್ತಾರೆ. ಅವರಿಗೂ ಸರ್ಕಾರ ಸವಲತ್ತು ಕೊಡಬೇಕು. ತಜ್ಞರು ಕೊಟ್ಟ ವರದಿ ಪ್ರಕಾರ ಅಂತರ್ ಜಿಲ್ಲಾ ವಾಹನಗಳ ಓಡಾಟ ನಿಷೇಧ ಮಾಡಿ. ಮಂತ್ರಿಗಳಲ್ಲಿ ಸಮನ್ವಯ ಕೊರತೆ ಇದೆ ಅದನ್ನು ಸರಿಪಡಿಸಿ, ಟೆಸ್ಟ್ ರಿಪೋರ್ಟ್ ತಡ ಆಗ್ತಿರೋದು ಕೊರೊನಾ ಹರಡೋಕೆ ಕಾರಣ ಆಗ್ತಿದೆ. ಶೀಘ್ರವೇ ಟೆಸ್ಟ್ ರಿಪೋರ್ಟ್ ಬರೋ ಹಾಗೆ ಮಾಡಿ, ಕೊರೊನಾ ಟೆಸ್ಟ್ ಗೆ ಯಾವುದೇ ಹಣ ಪಡೆಯದೇ ಫ್ರೀ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಿ.ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದೇ ವೇಳೆ ಸದ್ಯ ಎಂಟು ವಲಯಗಳ ಉಸ್ತುವಾರಿ ಸಚಿವರಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಇದನ್ನು ಹೇಗೆ ಮಾಡ್ತೀರಾ ಎಂದು ಪ್ರಶ್ನಿಸಿ, ಈ ಸಮಿತಿ ಕೇವಲ ಕಾಟಾಚಾರಕ್ಕೆ ಆಗಬಾರದು. ಖಾಸಗಿ ಆಸ್ಪತ್ರೆ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಅದು ಬಿಟ್ಟು ನೀರು, ಕರೆಂಟ್ ಕಟ್ ಮಾಡ್ತೀವಿ ಅಂತ ಬೆದರಿಕೆ ಹಾಕಬೇಡಿ. ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಗಳಿಗೆ ಸರ್ಕಾರದ ಸವಲತ್ತು ಮತ್ತು ವಿಮೆ ಮಾಡಿಸಿ ಎಂದು ಒತ್ತಾಯಿಸಿದರು.








