ಬೆಂಗಳೂರು, ಡಿ.12: ಮಲೆನಾಡು (Malenadu) – ಕರಾವಳಿ (Coastal Belt) ಸೇರಿದಂತೆ ಪಶ್ಚಿಮ ಘಟ್ಟದಲ್ಲಿ (Western Ghats) ಕಂಡುಬರುವ ಗಿಡ್ಡ ತಳಿಯೇ ಮಲೆನಾಡು ಗಿಡ್ಡ. ಅದರಲ್ಲೂ ಪ್ರಕೃತಿದತ್ತವಾದ ಗಿಡ್ಡ ಆಕಾರವೇ ಮಲೆನಾಡು ಗಿಡ್ಡ ತಳಿಯ ವಿಶೇಷತೆ. ನೋಡಲು ಗಿಡ್ಡವಾಗಿದ್ರೂ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸಲು ಬೇಕಾದ ದೇಹ ರಚನೆ, ಗಟ್ಟಿಮುಟ್ಟಾದ ಗೊರಸುಗಳು ಚಂಗನೆ ನೆಗೆಯುವ ಸಾಮಥ್ರ್ಯ, ಕಡಿಮೆ ಆಹಾರ, ಗುಡ್ಡಗಾಡಿನಲ್ಲಿ ಮೇಯುವ ಕಾರಣದಿಂದ ಔಷಧಿಯ ಗುಣಗಳನ್ನೊಳಗೊಂಡಿರುವ ಗವ್ಯ ಉತ್ಪನ್ನಗಳು ಮಲೆನಾಡು ಗಿಡ್ಡ ತಳಿಗಳಿಂದ ಪಡೆಯಬಹುದಾಗಿದೆ. ಅಲ್ಲದೆ ಸಾವಯವ ಕೃಷಿಗೂ ಈ ತಳಿ ಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಾಧ್ಯ ಆಗುತ್ತೆ ಎಂದು ವಿಶ್ವ ಒಕ್ಕಲಿಗ ಮಠದ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಲೆನಾಡು ಗಿಡ್ಡ ತಳಿಗಳು ಅವನತಿಯ ಅಂಚಿನಲ್ಲಿವೆ. ಹೈನುಗಾರಿಕೆಯ ಕ್ರಾಂತಿಯಿಂದಾಗಿ ಮಲೆನಾಡು ಗಿಡ್ಡ ತಳಿಗಳನ್ನು ಸಾಕುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ಅಳಿವಿನಂಚಿನಲ್ಲಿರುವ ಮಲೆನಾಡು ಗಿಡ್ಡ ತಳಿಗಳನ್ನು ಉಳಿಸಿ, ಬೆಳೆಸುವ ಪ್ರಯತ್ನವನ್ನು ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನ ತಂಡವು ಮಾಡುತ್ತಿದೆ. ಈ ಅಭಿಯಾನದ ರೂವಾರಿ ಸುಳ್ಯ ತಾಲೂಕಿನ ಅಲೆಕಾಡಿಯ ನೀರುಡೇಲ್‍ನ ಅಕ್ಷಯ್ ಆಳ್ವ. ಸ್ನಾತಕೋತ್ತರ ಪದವಿ ಪಡೆದು ಉದ್ಯೋಗದಲ್ಲಿದ್ರೂ ಇದೀಗ ಉದ್ಯೋಗವನ್ನು ಬಿಟ್ಟು ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಈಗಾಗಲೇ ಸಾವಯವ ಕೃಷಿ, ಗೋ ಆಧಾರಿತ ಕೃಷಿ ಮಾಡುವ ಸುಮಾರು ಮೂರು ಸಾವಿರ ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡ ತಳಿಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಲೆನಾಡು ಗಿಡ್ಡ ತಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಹೆಣ್ಣು ಕರುಗಳ ಅಭಾವ ಇದೆ. ಗಂಡು ಕರುಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ ಜೋಡೆತ್ತು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ನಂದಿಗಳನ್ನು ಉಳಿಸಿದ್ರೆ ಮಾತ್ರ ಮಲೆನಾಡು ಗಿಡ್ಡ ತಳಿಗಳ ಸಂತತಿ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಡಿಸೆಂಬರ್ 7ರಂದು ಮಲೆನಾಡು ಗಿಡ್ಡ ತಳಿಯ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನ ಹಾಗೂ ಹಾಸನ್ ಗೂಳಿಯ ಗೋವು ದೇವಾಲಯ ಸೋರೆಕಾಯಿಪುರ ಇವರ ಆಶ್ರಯದಲ್ಲಿ ಮಲೆನಾಡು ಗಿಡ್ಡ ಹೋರಿ ಹಬ್ಬ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಮಲ್ಲಿಗಮ್ಮ ದೇವಸ್ಥಾನ ಸೋರೆಕಾಯಿಪುರದಲ್ಲಿ ಈ ಹೋರಿ ಹಬ್ಬ ನಡೆಯಲಿದೆ. ಈ ಹಬ್ಬದಲ್ಲಿ 50 ದೇಶಿ ತಳಿಯಾದ ಮಲೆನಾಡು ಗಿಡ್ಡ ತಳಿಯ ಜೋಡಿ ಹೋರಿಗಳನ್ನು ಉಚಿತವಾಗಿ 50 ರೈತರಿಗೆ ನೀಡಲಾಗುತ್ತದೆ ಎಂದು ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ್ ಆಳ್ವ ತಿಳಿಸಿದ್ದಾರೆ.
ಇದನ್ನೂ ಓದಿ: ಕನಕಪುರ ಬಂಡೆ ನನ್ನ ಕತ್ತು ಕೊಯ್ದಿದ್ದು ಗೊತ್ತು, ಗೌಡರು ಅಧಿಕಾರಕ್ಕೆ ಸ್ವಾಮೀಜಿಗಳನ್ನು ಬಳಸಿಕೊಂಡವರಲ್ಲ: ಎಚ್‌ಡಿಕೆ ಗುಡುಗು
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಠದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದ ಸ್ವಾಮೀಜಿಯವರು ವಹಿಸಲಿದ್ದಾರೆ. ಶ್ರವಣಬೆಳಗೊಳದ ಶಾಸಕರಾದ ಡಾ. ಸಿ.ಎನ್. ಬಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಅಧ್ಯಕ್ಷರಾದ ಭಕ್ತಿ ಭೂಷಣ್ ದಾಸ್ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದ್ರು.
ಈಗಾಗಲೇ ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಿಂದ ಬಿಂಡಿಕೆನವಿಲೆಯಲ್ಲಿ ಗೋಕಲ್ಯಾಣ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ 15 ರೈತರಿಗೆ ಒಂದು ಹೋರಿ – ಒಂದು ದನದ ಜೋಡಿಯನ್ನು ವಿತರಿಸಲಾಗಿದೆ. ಅಲ್ಲದೆ ಮಲೆನಾಡು ಗಿಡ್ಡ ತಳಿಯ ಸುಮಾರು ನೂರು ಜೋಡೆತ್ತುಗಳನ್ನು ಬಯಲು ಸೀಮೆಯಲ್ಲಿ ವಿತರಣೆ ಮಾಡಿದ್ದೇವೆ ಎಂದು ಅಕ್ಷಯ್ ಆಳ್ವ ತಿಳಿಸಿದರು.
ಆದ್ರೆ ಈ ಜೋಡೆತ್ತುಗಳು ಅಥವಾ ಮಲೆನಾಡು ಗಿಡ್ಡ ತಳಿಗಳನ್ನು ಪಡೆಯುವ ರೈತರಿಗೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಸಾವಯವ ಕೃಷಿ ಮಾಡುವ ರೈತರು, ಹಿಂದೂ ಸಮುದಾಯವರಿಗೆ ಮಾತ್ರ ಮಲೆನಾಡು ಗಿಡ್ಡ ತಳಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮಲೆನಾಡು ಗಿಡ್ಡ ಗಳನ್ನು ಮಾರಾಟ ಮಾಡುವ ಹಾಗಿಲ್ಲ. ತಳಿಗಳು ಸತ್ತು ಹೋದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ನೀಡಬೇಕು. ಕಾಣೆಯಾದ್ರೆ ಎಫ್‍ಐಆರ್ ಮಾಡಬೇಕು. ಇಲ್ಲದೇ ಇದ್ರೆ 2 ಲಕ್ಷ ರೂಪಾಯಿ ದಂಡವನ್ನು ಕಟ್ಟಬೇಕು. ಹಾಗೇ ನಾವು ವಿತರಣೆ ಮಾಡಿದ ಮಲೆನಾಡು ಗಿಡ್ಡ ತಳಿಗಳ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಎಲ್ಲೂ ಕೂಡ ದುರುಪಯೋಗ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಅಕ್ಷಯ್ ಆಳ್ವ ಮಾಹಿತಿ ನೀಡಿದ್ರು.
ಈಗಾಗಲೇ ರಾಜ್ಯಾದ್ಯಂತ ನಮ್ಮ ಅಭಿಯಾನಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಅದರಲ್ಲೂ ಬಯಲು ಸೀಮೆಗಳ ರೈತರು ಹೆಚ್ಚಿನ ಬೇಡಿಕೆಯನ್ನಿಡುತ್ತಿದ್ದಾರೆ. ನಾವು ಈ ಹೋರಿ ಹಬ್ಬದಲ್ಲಿ ಒಂದರಿಂದ ಮೂರು ವರ್ಷದ ಕರುಗಳನ್ನು ಮಾತ್ರ ವಿತರಣೆ ಮಾಡುತ್ತೇವೆ. ಇಲ್ಲಿ ಯಾವುದೇ ವ್ಯಾಪಾರ ನಡೆಯುವುದಿಲ್ಲ. ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೇ ಮಲೆನಾಡು ಗಿಡ್ಡ ತಳಿಗಳನ್ನು ಸಾಕುತ್ತಿರುವ ರೈತರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








