ಬಿಜೆಪಿ ಕಾರ್ಯಕರ್ತನ ಸಾವಿಗೆ ಆಕ್ರೋಶ – ಸಂಸದರು ಶಾಸಕರು ಮುಖಂಡರಿಗೆ ಘೇರಾವ್
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ. ಪ್ರವೀಣ್ ಮೃತಪಟ್ಟ ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರ ಆಕ್ರೋಶ ಸ್ಪೋಟಗೊಂಡಿದೆ. ತಮ್ಮದೇ ಪಕ್ಷ ಆಡಳಿತದಲ್ಲಿದ್ದರೂ ಪಕ್ಷದ ಕಾರ್ಯಕರ್ತರು, ಹಿಂದೂ ಬೆಂಬಲಿಗರು ಸಾಲು ಸಾಲು ಹತ್ಯೆಗಳಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಮಟ್ಟದ ಹಲವು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಹರವಿನಂಗಡಿ ಸೇರಿ ಯುವಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ 9 ಮಂಡಲದ ಅಧ್ಯಕ್ಷರು ಸೇರಿ ಎಲ್ಲರೂ ಪಕ್ಷದ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಸ್ಔಂ ಪ್ರೇರಿತರಾಗಿ ಬಿಜೆಪಿ ಪಕ್ಷದ ಜವಬ್ದಾರಿಗಳಿಗೆ ರಾಜಿನಾಮೆ ನೀಡಲಾಗುತ್ತಿದೆ.
ಇನ್ನೂ ಅಂತ್ಯಸಂಸ್ಕಾರಕ್ಕೂ ಮುನ್ನಾ ಪುಷ್ಪಾಲಕೃತ ಆಂಬುಲೆನ್ಸ್ ನಲ್ಲಿ ಪ್ರವೀಣ್ ನೆಟ್ಟಾರು ಮೃತದೇಹ ಬೆಳ್ಳಾರೆಗೆ ಕರೆತರುವಾಗ ಸಾವಿರಾರು ಕಾರ್ಯಕರ್ತರು ಜೊತೆಯಲ್ಲಿ ಹೆಜ್ಜೆ ಹಾಕಿದರು. ಮೃತದೇಹ ಮನೆಗೆ ಆಗಮಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಬಂದಿದ್ದರು.
ಈ ವೇಳೆ ಸಂಸದರು, ಸಚಿವರು ಮತ್ತು ಶಾಸಕರ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಂಡು ಧಿಕ್ಕಾರ ಕೂಗಿದರು. ಕಟೀಲ್ ಅವರ ಕಾರಿನ ಸುತ್ತ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ಘೇರಾವ್ ಹಾಕಿ ಆಕ್ರೋಶ ಹೊರಹಾಕಿದರು. ನಳೀನ್ ಅವರ ಕಾರನ್ನ ಸುತ್ತುವರೆದು ಪಲ್ಟಿ ಹಾಕಲೂ ಯತ್ನಿಸಿದರು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಬೀಸಿದರು.
ಆರ್ಎಸ್ಎಸ್ ಮುಖಂಡರಿಗೂ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿ, ಧಿಕ್ಕಾರ ಕೂಗಿದರು. ನ್ಯಾಯಕ್ಕಾಗಿ ಆಗ್ರಹಿಸಿದ ಕಾರ್ಯಕರ್ತರು, ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕರಾವಳಿ ಭಾಗದ ಮುಖಂಡರರಿಗೆ ಕಾರ್ಯಕರ್ತರ ಆಕ್ರೋಶದ ಬಿಸಿ ತಟ್ಟಿತು.








