ಉತ್ತರ ಕನ್ನಡ: ಪಿಎಸ್ ಐ ಕಿರುಕುಳ ತಾಳಲಾರದೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಜೋಯಿಡಾ(Joida) ತಾಲೂಕಿನ ರಾಮನಗರದ ಹನುಮಾನ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ರಾಮನಗರ ಪಿಎಸ್ ಐ ಬಸವರಾಜ್ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ.
ತನ್ನ ಮಾವ ಗಣಪತಿ ಎಂಬುವವರು ಪ್ಲಾಟ ವಿಚಾರದಲ್ಲಿ ನೋಟಿಸ್ ಕೊಟ್ಟಿದಕ್ಕೆ, ನಿನ್ನೆ(ಜೂ.13) ರಾತ್ರಿ ರಾಮನಗರ ಪೊಲೀಸ್ ಠಾಣೆಗೆ ಬಂದಿದ್ದ. ಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಪಿಎಸ್ಐ ಮತ್ತು ಠಾಣೆಯ ಇನ್ನಿತರ ಸಿಬ್ಬಂಧಿಗಳು ಸೇರಿ ಈತನ ಬಳಿಯ ಮೊಬೈಲ್ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದಾರೆಂದು ಭಾಸ್ಕರ್ ಆರೋಪಿಸಿದ್ದಾರೆ. ಹಿಂದೆಯೂ ಪಿಎಸ್ ಐ ಹಾಗೂ ಭಾಸ್ಕರ್ ಮಧ್ಯೆ ಕಿರಿಕ್ಕು ನಡೆದಿತ್ತು ಎನ್ನಲಾಗಿದೆ.
ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೂಡ ಸ್ಪಂದಿಸಿಲ್ಲ. ಇದರಿಂದಾಗಿ ಮನನೊಂದು ಭಾಸ್ಕರ್ ಮೈ ಮೇಲೆ ಪೆಟ್ರೊಲ್ ಸುರಿದುಕೊಂಡು ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆಗೆ ಯತ್ನಸಿದ್ದಾರೆ. ಕೂಡಲೇ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಭಾಸ್ಕರ್ ಆರೋಪ ತಳ್ಳಿ ಹಾಕಿರುವ ಎಎಸ್ಪಿ ಜಯಕುಮಾರ್, ‘ಭಾಸ್ಕರ್ ರಾತ್ರಿ ಮಧ್ಯಪಾನ ಮಾಡಿ ಠಾಣೆಗೆ ಬಂದು ತನ್ನ ಮಾವನಿಗೆ ಯಾಕೆ ನೋಟಿಸ್ ಕೊಟ್ಟಿದ್ದಿರಾ ಎಂದು ಜೋರಾಗಿ ಪ್ರಶ್ನಿಸಿದ್ದಾನೆ. ಠಾಣೆಯಲ್ಲಿ ದುರ್ವತನೆ ಮಾಡುತ್ತಿದ್ದ. ಹೆಚ್ಚಾಗಿ ಕುಡಿದಿದ್ದರಿಂದಾಗಿ ಬೈಕ್ ವಶಕ್ಕೆ ಪಡೆಯಲಾಗಿತ್ತು. ಇದರಿಂದ ಕೋಪಗೊಂಡು ಈ ರೀತಿ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.