PSI ಅಕ್ರಮ ನೇಮಕಾತಿ | 22 ಅಭ್ಯರ್ಥಿಗಳ ವಿರುದ್ಧ ಎಫ್ ಆರ್ ದಾಖಲು
ಬೆಂಗಳೂರು: PSI ಅಕ್ರಮ ನೇಮಕಾತಿ ಸಂಬಂಧಿಸಿದಂತೆ ಬೆಂಗಳೂರಿನ 22 ಅಭ್ಯರ್ಥಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ಒಟ್ಟು ಏಳು ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಿ 172 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಪ್ರಮುಖವಾಗಿ ಕೇಂಬ್ರಿಡ್ಜ್ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲೇ ಹೆಚ್ಚು ಅಕ್ರಮ ಪತ್ತೆಯಾಗಿದ್ದು, 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ದೂರು ನೀಡಿದ್ದರು.
ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ಅವರು ನೀಡಿದ ದೂರಿನನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ದೂರಿಗೆ ಸಂಬಂಧಿಸಿದಂತೆ 12 ಜನರ ಬಂಧನವಾಗಿದ್ದು, ಉಳಿದ 10 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿದೆ.
ಇನ್ನೂ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇಂದು ಸಿಐಡಿಗೆ ಅಧಿಕೃತವಾಗಿ ವರ್ಗಾವಣೆಯಾಗಲಿದ್ದು, ಬಂಧಿತರನ್ನು ಸಿಐಡಿ ವಶಕ್ಕೆ ಪಡೆಯಲಿದೆ. ಬಳಿಕ ಬಂಧಿತರ ವಿಚಾರಣೆ ಮಾಡಲಿರುವ ಸಿಐಡಿ ಅಕ್ರಮಕ್ಕೆ ಸಹಕರಿಸಿದವರ ಬಂಧನಕ್ಕೆ ಬಲೆ ಬೀಸಿದೆ.
ಆಶ್ಚರ್ಯಕರ ಸಂಗತಿ ಎಂದರೆ ಬಂಧಿತ ಹನ್ನೆರಡು ಜನರಲ್ಲಿ ಮೂವರು ಪೊಲೀಸ್ ಇಲಾಖೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದವರಿದ್ದಾರೆ.