ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಆಡಳಿತ ಚುರುಕುಗೊಳಿಸಲು ಉಪನ್ಯಾಸಕರ ಸೇವಾ ವಿಷಯಗಳನ್ನು ಸಕಾಲ ಯೋಜನೆ ವ್ಯಾಪ್ತಿಗೆ ತರಲು ಆಲೋಚಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಿಯು ಇಲಾಖೆಯಲ್ಲಿ ಸೇವಾ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಸಂಘಟನೆಗಳು ಗಮನಕ್ಕೆ ತಂದಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಸೇವೆಗಳು ಕ್ಷಿಪ್ರಗತಿಯಲ್ಲಿ ದೊರೆಯುವಂತಾಗಲು ಇಲಾಖೆಯ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು.

ಪಿಯು ಉಪನ್ಯಾಸಕರ ವಿವಿಧ ಬೇಡಿಕೆಗಳ ಕುರಿತು ಮಾತನಾಡಿದ ಸಚಿವರು, ಪದವಿ ಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣೆಗೆ ಈಗಾಗಲೇ ಇರುವ ಕಾಯ್ದೆಯಡಿ ನಿಯಮ ರೂಪಿಸುವ ಕೆಲಸ ಪ್ರಗತಿಯಲ್ಲಿದ್ದು, ನಿಯಮಗಳನ್ನು ರೂಪಿಸಿದ ನಂತರ ವರ್ಗಾವಣೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸೇವಾ ವಿಷಯಗಳಲ್ಲಿನ ವಿಳಂಬ ನಿರ್ವಹಣೆಗೆ ಕಡತ ವಿಲೇವಾರಿಗೆ ಇ-ಕಚೇರಿ ಬಳಕೆ ಮತ್ತು ಅಧಿಕಾರ ವಿಕೇಂದ್ರೀಕರಣ ಮಾಡಿ ವಿಳಂಬವಿಲ್ಲದೇ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕಡತಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಿಯು ನಿರ್ದೇಶಕರಿಗೆ ಸೂಚಿಸಿದರು.
ಮುಕ್ತ ವಿವಿ ಕುಲಪತಿಗಳೊಂದಿಗೆ ಚರ್ಚೆ
2007ರಿಂದೀಚೆಗೆ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗೆ ಬಿ.ಇಡಿ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಹಾಲಿ ಸೇವೆಯಲ್ಲಿರುವ ಉಪನ್ಯಾಸಕರು ಬಿ.ಇಡಿ ಪಡೆಯಬೇಕಿದ್ದು, ಅದರಲ್ಲಿ 2357 ಮಂದಿ ಅನುದಾನಿತ ಕಾಲೇಜುಗಳ ಉಪನ್ಯಾಸಕರು ಬಿ.ಇಡಿ ಪಡೆಯುವುದು ಬಾಕಿಯಿರುವ ಹಿನ್ನೆಲೆಯಲ್ಲಿ ಈ ಎಲ್ಲ ಉಪನ್ಯಾಸಕರು ಏಕ ಕಾಲದಲ್ಲಿ ಬಿ.ಇಡಿ ಪಡೆಯಲು ಅನುವಾಗುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಒಂದು ಬಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳೊಂದಿಗೆ ಚರ್ಚಿಸಿದ್ದೇನೆ. ಉನ್ನತ ಶಿಕ್ಷಣ ಸಚಿವ ಡಿಸಿಎಂ ಡಾ. ಸಿ.ಎನ್. ಆಶ್ವತ್ಥ್ ನಾರಾಯಣ್ ಅವರೊಂದಿಗೆ ಈ ಸಂಬಂಧದಲ್ಲಿ ಚರ್ಚಿಸಲಾಗುವುದು ಎಂದರು.

ಕುಮಾರನಾಯ್ಕ ಸಮಿತಿ ಶಿಫಾರಸ್ಸಿನಂತೆ ಉನ್ನತ ಪದವಿ ಹೊಂದಿದ ಉಪನ್ಯಾಸಕರಿಗೆ ಬಡ್ತಿ ಸೇರಿದಂತೆ ವೇತನ ಬಡ್ತಿ ನೀಡಿಕೆ ಕುರಿತು ನಿರ್ಧಾರ ಕೈಗೊಳ್ಳಲು ಅಧಿಕಾರಿಗಳಿಗೆ ಕಡತ ಮಂಡಿಸುವಂತೆ ಸೂಚನೆ ನೀಡಿದ ಸಚಿವರು, ಪದವಿ ಕಾಲೇಜುಗಳಿಗೆ ಬಡ್ತಿ ನೀಡುವ ಕುರಿತಂತೆ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಬಿ.ಎಡ್ ವಿನಾಯ್ತಿ
ವೃತ್ತಿಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಪಿಯು ಉಪನ್ಯಾಸಕರು ಈಗಾಗಲೇ ನಿವೃತ್ತಿಗೆ ಸಮೀಪದಲ್ಲಿರುವುದು ಮತ್ತು ಅವರ ಅತಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅವರುಗಳಿಗೆ ಬಿ.ಇಡಿ ಪದವಿ ಪಡೆಯುವುದರಿಂದ ವಿನಾಯ್ತಿ ನೀಡಲು ಮತ್ತು ಖಾಯಂ ಪೂರ್ವ ಸೇವಾ ಅವಧಿ ಘೋಷಣೆ ಮಾಡಲು ಇಲಾಖೆಯಲ್ಲಿ ಅನುಕೂಲಕರವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೇವಲ 7 ವರ್ಷಕ್ಕಿಂತ ಕಡಿಮೆ ಸೇವೆ ಇರುವ ಜೆಒಸಿ ವಿಲೀನ ಉಪನ್ಯಾಸಕರಿಗೆ ಬಿ.ಇಡಿ ವಿನಾಯ್ತಿ ನೀಡಲು ಪರಿಶೀಲಿಸಲಾಗುವುದು ಎಂದೂ ಸಚಿವರು ತಿಳಿಸಿದರು.
ಪ್ರಿನ್ಸಿಪಾಲರ ನೇರ ನೇಮಕ, ಉಪನ್ಯಾಸಕರಿಂದ ಪ್ರಾಚಾರ್ಯರ ಸ್ಥಾನಕ್ಕೆ ಮತ್ತು ಪ್ರಾಚಾರ್ಯರಿಂದ ಉಪನಿರ್ದೇಶಕರ ಸ್ಥಾನಕ್ಕೆ ಬಡ್ತಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಬೇಡಿಕೆಗಳನ್ನು ಸಂಘಟನೆಯ ಪದಾಧಿಕಾರಿಗಳು ಗಮನಕ್ಕೆ ತಂದಿದ್ದು, ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸುರೇಶ್ ಕುಮಾರ್ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಮೌಲ್ಯಮಾಪನ ಸಹಕಾರಕ್ಕೆ ಮನವಿ
ಕೋವಿಡ್ ಸಾಂಕ್ರಾಮಿಕ ರೋಗದ ಪ್ರಸರಣದ ಹಿನ್ನೆಲೆಯಲ್ಲಿ ಈಗಾಗಲೇ ಪದವಿ ಪೂರ್ವ ಕಾಲೇಜುಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಯತ್ತ ಮುಖ ಮಾಡಿದ್ದು ಅಧ್ಯಯನದಲ್ಲಿ ತೊಡಗಿದ್ದಾರೆ. ನಿಗದಿತ ಅವಧಿಯಲ್ಲಿ ಪರೀಕ್ಷೆ ಆರಂಭವಾಗಲಿದ್ದು, ಈ ವಿಷಮ ಕಾಲಘಟ್ಟದಲ್ಲಿ ಉಪನ್ಯಾಸಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವಿಷಯದಲ್ಲಿ ಹೆಚ್ಚಿನ ಸಹಕಾರ ನೀಡಬೇಕೆಂದು ಕೋರಿದರು. ಇಂತಹ ಕಾಲಘಟ್ಟದಲ್ಲಿ ನಾವು ನಮ್ಮ ಮಕ್ಕಳಲ್ಲಿ ವಿಶ್ವಾಸ ಮೂಡಿಸಬೇಕಾಗಿರುವುದರಿಂದ ಮೌಲ್ಯಮಾಪನ ಬಹಿಷ್ಕಾರ ಸೇರಿದಂತೆ ಯಾವುದೇ ಪ್ರತಿಭಟನೆಗಳಿಗೆ ಮುಂದಾಗಬಾರದೆಂದೂ ಸಚಿವರು ಮನವಿ ಮಾಡಿದರು.








