ಶ್ರೀನಗರ, ಮೇ 28 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಭಾರೀ ದಾಳಿ ನಡೆಸುವ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ.
20ಕೆಜಿಗೂ ಹೆಚ್ಚು ತೂಕದ ಸುಧಾರಿತ ಸ್ಫೋಟಕ ಸಾಧನ (ಐಟಿಡಿ) ಹೊತ್ತು ಸಾಗುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿದ ಭದ್ರತಾ ಪಡೆಗಳು ಈ ಮೂಲಕ ನಡೆಯಬಹುದಾಗಿದ್ದ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಇಂದು ಬೆಳಿಗ್ಗೆ ಚೆಕ್ ಪಾಯಿಂಟ್ ಬಳಿ ನಕಲಿ ನೋಂದಣಿ ಸಂಖ್ಯೆ ಹೊಂದಿದ್ದ ಕಾರೊಂದು ಚಲಿಸುತ್ತಿದ್ದು, ಅದನ್ನು ನಿಲ್ಲಿಸುವಂತೆ ಭದ್ರತಾ ಪಡೆಗಳು ಸೂಚಿಸಿದ್ದಾರೆ. ಆದರೆ ಚಾಲಕ ಮತ್ತಷ್ಟು ವೇಗವಾಗಿ ಕಾರನ್ನು ಚಲಾಯಿಸಿದ್ದಾನೆ. ಆಗ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ಆದರೂ ಚಾಲಕ ವಾಹನ ಚಾಲನೆ ಮುಂದುವರಿಸಿದ್ದು, ನಂತರ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಪ್ತಚರ ದಳ, ಸಂಭಾವ್ಯ ದಾಳಿ ಬಗ್ಗೆ ಮಾಹಿತಿ ನೀಡಿದ್ದು, ಐಇಡಿ ತುಂಬಿದ್ದ ವಾಹನದ ಬರುವಿಕೆಗಾಗಿ ನಾವು ಕಾಯುತ್ತಿದ್ದೆವು. ಇದೀಗ ಐಇಡಿಯನ್ನು ಜೋಪಾನವಾಗಿ ಕಾರಿನಿಂದ ಹೊರಗೆ ತೆಗೆದಿದ್ದು, ಬಾಂಬ್ ನಿಷ್ಕ್ರಿಯ ದಳ ಅದನ್ನು ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಅರೆ ಸೇನಾಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು. ಬಾಂಬ್ ನಿಷ್ಕ್ರಿಯಗೊಳಿಸುವ ಸಮಯದಲ್ಲಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದ್ದು, ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿದಂತೆ ಹಾಗೂ ಯಾವುದೇ ಮನೆಗಳಿಗೂ ಹಾನಿಯಾಗದಂತೆ ಬಾಂಬ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.