ಗುರುಕಿರಣ್ ಮತ್ತು ಅಪ್ಪು ನಡುವಿನ ವೃತ್ತಿ-ಬದುಕಿನ ನಂಟು
ಕನ್ನಡದ ನಟಸಾರ್ವಭೌಮ, ರಾಜ ರತ್ನ ಪುನೀತ್ ರಾಜ್ ಕುಮಾರ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 11.30 ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅಂದಹಾಗೆ ಪುನೀತ್ ರಾಜ್ ಕುಮಾರ್ ಇಂದು ಬೆಳಿಗ್ಗೆ 07.30ರ ಸುಮಾರಿಗೆ ಭಜರಂಗಿ-2 ಸಿನಿಮಾಗೆ ವಿಶ್ ಮಾಡಿದ್ದಾರೆ. ಜೊತೆಗೆ ಎಂದಿನಂತೆ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ರು. ಈ ವೇಳೆ ಎದೆನೋವು ಕಾಣಿಸಿಕೊಂಡು ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ.
ಕಳೆದ 19 ವರ್ಷಗಳಿಂದ ನಾಯಕನಟನಾಗಿ ಪುನೀತ್ 29 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳ ಪೈಕಿ 16ಕ್ಕೂ ಹೆಚ್ಚು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಯಶಸ್ಸುಕಂಡಿದ್ದವು.
ಚಿತ್ರಕಥೆ ಮತ್ತು ಸಂಗೀತಕ್ಕೆ ಆಧ್ಯತೆ ನೀಡುತ್ತಿದ್ದ ಅಪ್ಪು ತಮ್ಮ ಪ್ರತಿ ಚಿತ್ರಗಳ ಹಾಡುಗಳು ಕೂಡ ಸದಾ ನೆನಪಿನಲ್ಲಿರುತ್ತದೆ. ಸಣ್ಣವರಿಂದ ಹಿಡಿದು ಹಿರಿಯರ ತನಕ ಜೊತೆಯಾಗಿ ಅಪ್ಪು ಸಿನಿಮಾಗಳನ್ನು ನೋಡಿ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದರು.
ಇನ್ನು ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಪುನೀತ್ ನಡುವೆ ಅವಿನಾಭವ ಸಂಬಂಧವಿತ್ತು. ಪುನೀತ್ ಅವರ ಮೊದಲ ಚಿತ್ರ ಅಪ್ಪುಗೆ ಗುರುಕಿರಣ್ ಸಂಗೀತ ಸಂಯೋಜಿಸಿದರು. ಹಾಗೇ ಅಪ್ಪು ಬಳಿಕ ಬಂದ ಅಭಿ, ನಮ್ಮ ಬಸವ, ಮೌರ್ಯ ಮತ್ತು ಬಿಂದಾಸ್ ಚಿತ್ರಗಳಿಗೆ ಗುರುಕಿರಣ್ ಸಂಗೀತದ ಸ್ಪರ್ಶವಿತ್ತು.
2008ರ ಬಿಂದಾಸ್ ನಂತರ ಪುನೀತ್ ರಾಜ್ ಕುಮಾರ್ ಮತ್ತು ಗುರುಕಿರಣ್ ಕಾಂಬಿನೇಷನ್ ನಲ್ಲಿ ಯಾವುದೇ ಚಿತ್ರಗಳು ಬಂದಿರಲಿಲ್ಲ. ಆದ್ರೆ ಅವರಿಬ್ಬರ ನಡುವೆ ಗಾಢವಾದ ಸ್ನೇಹ ಸಂಬಂಧವಿತ್ತು. ಹೀಗಾಗಿ ಪುನೀತ್ ತಮ್ಮ ಬದುಕಿನ ಕೊನೆಯ ದಿನದ ಊಟವನ್ನು ಗುರುಕಿರಣ್ ಮನೆಯಲ್ಲಿಯೇ ಮಾಡಿದ್ದರು.
ಅಕ್ಟೋಬರ್ 28 ರಂದು ಗುರುಕಿರಣ್ ಹುಟ್ಟುಹಬ್ಬದ ಅಂಗವಾಗಿ ಮನೆಯಲ್ಲಿ ಬರ್ತ್ ಡೇ ಪಾರ್ಟಿಯನ್ನು ಆಯೋಜಿಸಿದರು. ಈ ಬರ್ತ್ ಡೇ ಪಾರ್ಟಿಯಲ್ಲಿ ಪುನೀತ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಗುರುಕಿರಣ್ ಜೊತೆ ಚಿತ್ರ ಮತ್ತು ಮುಂದಿನ ಜೀವನದ ಬಗ್ಗೆ ಮಾತುಕತೆ ನಡೆಸಿದ್ದರು. ಆದ್ರೆ ವಿಧಿಯಾಟ ಬೇರೇನೆ ಇತ್ತು. ಪುನೀತ್ ಅವರ ಜೀವನದ ಕೊನೆಯ ಪಾರ್ಟಿ ಇದಾಗುತ್ತೆ ಅಂತ ಯಾರೂ ಊಹಿಸರಿರಲಿಲ್ಲ.









