ಅಪ್ಪುಗಾಗಿ ರಾಜಕುಮಾರ್ ಹುಟ್ಟಿದ ಮನೆಯನ್ನು ಮ್ಯೂಸಿಯಮ್ ಮಾಡಲು ಹೊರಟ ಕುಟುಂಬ..!
ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಸುಮಾರು ಒಂದೂವರೆ ತಿಂಗಳೇ ಕಳೆದಿದೆ.. ಆದ್ರೂ ಆ ನೋವು ಮಾತ್ರ ಮಾಸಿಲ್ಲ.. ಅಪ್ಪು ನಮ್ಮೊಂದಿಗಿಲ್ಲ ಎನ್ನುವ ಕಹಿ ಸತ್ಯ ಅರಗಿಸಿಕೊಳ್ಳುವುದಕ್ಕೆ ಆಗ್ತಿಲ್ಲ.. ಅಪ್ಪು ಅಗಲಿಕೆಯ ನೋವಿನಿಂದ ಅವರ ಕುಟುಂಬ , ಅವರ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ.. ಈ ನಡುವೆ ದೊಡ್ಮನೆಯ ಕುಡಿಯ ನೆನಪಿನಲ್ಲಿ ಕುಟುಂಬಸ್ಥರು ರಾಜ್ ಕುಮಾರ್ ಅವರು ಹುಟ್ಟಿದ ಮನೆಯನ್ನ ಮ್ಯೂಸಿಯಮ್ ಮಾಡಲು ಮುಂದಾಗಿದ್ದಾರೆ..
ಗಾಜನೂರಿನ ಸಣ್ಣ ಗುಡಿಸಲು ಮನೆಯ ಮೇಲಿದ್ದ ಅಪ್ಪುವಿನ ಪ್ರೀತಿಯನ್ನು ತಿಳಿದಿರುವ ಕುಟುಂಬ ಆ ಮನೆಯನ್ನು ಅಭಿವೃದ್ಧಿಪಡಿಸಿ ಮ್ಯೂಸಿಯಂ ಮಾಡಲು ನಿರ್ಧರಿಸಿದೆ. ಡಾ.ರಾಜ್‌ಕುಮಾರ್ ಹುಟ್ಟಿದ ಆ ಮನೆ ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿ ನೆಲೆನಿಲ್ಲಲಿ. ಅಲ್ಲಿ ಪುನೀತ್ ನೆನಪಿಗೂ ಜಾಗ ಸಿಗಲಿ ಎಂದು ಕುಟುಂಬ ಯೋಜಿಸಿದೆ.
ಮೂರು ತಿಂಗಳ ಹಿಂದೆ ಪುನೀತ್ ರಾಜ್ ಕುಮಾರ್, ಗಾಜನೂರಿಗೆ ಭೇಟಿ ನೀಡಿ, ಆ ಗುಡಿಸಲು ಮನೆಗೆ ಹೋಗಿ ಅಲ್ಲಿ ಫೋಟೊ ತೆಗೆಸಿಕೊಂಡಿದ್ದರು. ತಾವು ಚಿಕ್ಕಂದಿನಲ್ಲಿ ಆಡಿ ಬೆಳೆದ ಗೆಳೆಯರನ್ನು ಭೇಟಿಯಾಗಿ ಅವರೊಡನೆ ಸೆಲ್ಫಿಯನ್ನೂ ಕೂಡ ತೆಗೆಸಿಕೊಂಡು , ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅಪ್ಪು ಆಸೆಯಂತೆ ತಂದೆ ರಾಜಕುಮಾರ್ ಹುಟ್ಟಿದ ಗುಡಿಸಲು ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಕೆಲಸ ಪೂರ್ಣವಾದ ಮೇಲೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರು ಆಗಮಿಸಿ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಮ್ಯೂಸಿಯಂ ರೀತಿ ಮಾಡಲಿದ್ದಾರಂತೆ. ಆ ನಂತರ ಆ ಮನೆಯನ್ನು ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.








