ತರಕಾರಿ ಅಂಗಡಿಯನ್ನು ಕಾಲಲ್ಲಿ ಒದ್ದು ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ
ನವದೆಹಲಿ : ಪೊಲೀಸ್ ಅಧಿಕಾರಿಯೊಬ್ಬರು ತರಕಾರಿ ಅಂಗಡಿಯನ್ನ ಕಾಲಿನಲ್ಲಿ ಒದ್ದು ಇದೀಗ ಸಸ್ಪೆಂಡ್ ಆಗಿರುವ ಘಟನೆ ಪಂಜಾಬಿನ ಫಗ್ವಾರ ಪ್ರದೇಶದಲ್ಲಿ ನಡೆದಿದೆ.
ಫಗ್ವಾರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತರಕಾರಿ ಮಾರಾಟ ಮಳಿಗೆಯನ್ನು ಕಾಲಿನಿಂದ ಜಾಡಿಸಿ ಒದ್ದಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗಹರಿಂದ ತೀವ್ರ ಆಕ್ರೋಶಗಳು ವ್ಯಕ್ತವಾದ ಬಳಿಕ ಅವರನ್ನ ಅಮಾನತು ಮಾಡಲಾಗಿದೆ.
ಫಗ್ವಾರ್ ಸ್ಟೇಷನ್ ಹೌಸ್ ಆಫೀಸರ್ ನವದೀಪ್ ಸಿಂಗ್ ತರಕಾರಿ ಅಂಗಡಿಯನ್ನು ಕಾಲಿನಿಂದ ಜಾಡಿಸಿ ದರ್ಪ ತೋರಿರುವ ಅಧಿಕಾರಿಯಾಗಿದ್ದಾರೆ.
ಇನ್ನು ನವದೀಪ್ ಸಿಂಗ್ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಪಂಜಾಬ್ ಪೊಲೀಸ್ ಡೈರೆಕ್ಟರ್ ಜನರಲ್ ದಿನಕರ್ ಗುಪ್ತ, ನವದೀಪ್ ಅವರನ್ನು ಅಮಾನತು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಚಿಕೆಗೇಡು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಫಗ್ವಾರಾ ಎಸ್ ಎಚ್ ಒ ಅವರನ್ನು ಅಮಾನತುಗೊಳಿಸಿದ್ದೇನೆ. ಅಂತಹ ಅಧಿಕಾರ ದುರುಪಯೋಗವನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಕೊರೊನಾ ಹಾವಳಿ ಹೆಚ್ಚಾದ ಪರಿಣಾಮ ಪಂಜಾಬ್ ನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿ ರೀತಿಯಾಗಿ ವರ್ತಿಸಿದ್ದರು ಎನ್ನಲಾಗಿದೆ.








